ಚ್ಯವನಪ್ರಾಶ – ಯಾರೆಲ್ಲಾ ಸೇವಿಸಬಹುದು?

ಇಂದ, ಡಾ. ಶಿಲ್ಪಾ. ಎಸ್.ಎನ್. ಎಂ.ಡಿ. (ಆಯು)

ಇಂದು ಆಯುರ್ವೇದದ ಹಲವು ಔಷಧಿಗಳು ಸಾಮಾನ್ಯ ಜನರಿಗೆ ಸುಪರಿಚಿತ.

ಮನೆಯ ಹಿರಿಯರಿಂದ ಅಥವಾ ವಾಣಿಜ್ಯ ಜಾಹಿರಾತುಗಳಿಂದ ಈ ಔಷಧಿಗಳ ಬಗ್ಗೆ ತಿಳಿದುಕೊಂಡು ಬಹು ಮಂದಿ ಇವುಗಳನ್ನು ಉಪಯೋಗಿಸುತ್ತಾರೆ. ಆದರೆ ಅವುಗಳ ಸರಿಯಾದ ಬಳಕೆ ಅನೇಕರಿಗೆ ತಿಳಿದಿರುವುದಿಲ್ಲ. ಹೀಗೆ ಬಳಕೆಯಾಗುವ ಆಯುರ್ವೇದದ ಹಲವಾರು ಔಷಧಿಗಳಲ್ಲಿ ಚ್ಯವನಪ್ರಾಶ ಲೇಹ್ಯವು ಪ್ರಮುಖವಾದದ್ದು.

ಪ್ರಮುಖ ದ್ರವ್ಯಗಳು

  ಚ್ಯವನ ಮಹರ್ಷಿಗಳು ಈ ಅವಲೇಹವನ್ನು ಆವಿಷ್ಕರಿಸಿದರೆಂಬುದು ಪ್ರತೀತಿ, ಆದ್ದರಿಂದಲೇ ಈ ಹೆಸರು. ಬೆಟ್ಟದ ನೆಲ್ಲಿಕಾಯಿ ಈ ಲೇಹ್ಯದ ಪ್ರಮುಖ ದ್ರವ್ಯ. ದಶಮೂಲಗಳೆಂದು ಕರೆಯಲ್ಪಡುವ ಬಿಲ್ವ, ನೆಗ್ಗಿಲುಮುಳ್ಳು ಮುಂತಾದ ಹತ್ತು ವಿಧದ ಬೇರುಗಳು, ಜೀವನೀಯ ಔಷಧಿಗಳು, ತ್ರಿಫಲಾ, ಚಂದನ, ಆಡುಸೋಗೆ, ಪುನರ್ನವಾ, ಚಕ್ಕೆ, ಏಲಕ್ಕಿ, ದಾಲ್ಚಿನಿ, ಬೆಲ್ಲ ಮುಂತಾದವು ಇದರ ತಯಾರಿಕೆಯಲ್ಲಿ ಬಳಸುವ ಇತರ ಔಷಧೀಯ ದ್ರವ್ಯಗಳು. ಇವುಗಳೊಂದಿಗೆ ಹಸುವಿನ ತುಪ್ಪ, ಎಳ್ಳೆಣ್ಣೆ, ಜೇನುತುಪ್ಪಗಳನ್ನೂ ಕೂಡ ಸೇರಿಸಲಾಗುತ್ತದೆ.

 ಉಪಯೋಗ

ಆಯುರ್ವೇದ ಗ್ರಂಥಗಳಲ್ಲಿ ಕೆಮ್ಮು, ಉಸಿರಾಟದ ತೊಂದರೆ, ಶರೀರ ದೌರ್ಬಲ್ಯ, ಗಂಟಲಿನ ಸಮಸ್ಯೆಗಳು, ಹೃದಯ ಸಂಬಂಧೀ ಖಾಯಿಲೆಗಳು, ಮೂತ್ರ ವಿಕಾರಗಳು, ವೀರ್ಯದಲ್ಲಿನ ತೊಂದರೆಗಳು ಮುಂತಾದವುಗಳಲ್ಲಿ ಚ್ಯವನಪ್ರಾಶದ ಉಪಯುಕ್ತತೆಯನ್ನು ವಿವರಿಸಲಾಗಿದೆ. ಅಂತೆಯೇ ಚ್ಯವನಪ್ರಾಶವು ಬುದ್ಧಿಶಕ್ತಿ, ಕಾಂತಿ, ಆರೋಗ್ಯ, ಆಯುಷ್ಯ, ಇಂದ್ರಿಯಬಲ, ಜೀರ್ಣಶಕ್ತಿ, ವೀರ್ಯ – ಇವುಗಳನ್ನು ಹೆಚ್ಚಿಸುತ್ತದೆ. ಆದರೆ ಯಾವುದೇ ಲೇಹ್ಯವನ್ನು ಯಾವ ಅವಸ್ಥೆಯಲ್ಲಿ ಮತ್ತು ಯಾವ ಬಗೆಯಲ್ಲಿ ಸೇವಿಸಬೇಕೆಂಬುದನ್ನು ಅರಿತಿರಬೇಕು.

ಆಯುರ್ವೇದ ಚಿಕಿತ್ಸಾ ಕ್ರಮ

ಆಯುರ್ವೇದದಲ್ಲಿ ವೈದ್ಯರು ದೇಶ, ಕಾಲ, ಅಗ್ನಿ(ಜೀರ್ಣಶಕ್ತಿ), ರೋಗ, ರೋಗಿ ಮುಂತಾದವುಗಳ ಆಧಾರದ ಮೇಲೆ ಯಾವುದೇ ಚಿಕಿತ್ಸೆಯನ್ನು ತೀರ್ಮಾನಿಸುತ್ತಾರೆ. ಆದ್ದರಿಂದ ರೋಗದ ಒಂದು ಹಂತದಿಂದ ಮತ್ತೊಂದು  ಹಂತಕ್ಕೆ ಚಿಕಿತ್ಸೆ ಮತ್ತು ಔಷಧಿಗಳು ಬದಲಾಗುತ್ತಾ ಹೋಗುತ್ತವೆ. ಚಿಕಿತ್ಸೆಯ ಪ್ರಾರಂಭದ ಹಂತದಲ್ಲಿ ಶರೀರದ ಒಳಗಿರುವ ದೋಷಗಳ ವೈಪರೀತ್ಯವನ್ನು ಸರಿಪಡಿಸಲಾಗುತ್ತದೆ. ನಂತರ ಶರೀರದ ವಿವಿಧ ಸ್ತರಗಳಲ್ಲಿ ಏರುಪೇರಾಗಿರುವ ಎಲ್ಲಾ ಸ್ರೋತಸ್ಸುಗಳ (Internal channels) ವ್ಯವಸ್ಥೆಯನ್ನು ಸರಿಪಡಿಸುವುದು ಮುಂತಾದವುಗಳನ್ನು ಒಳಗೊಂಡಿರುತ್ತದೆ. ಚಿಕಿತ್ಸೆಯ ಕೊನೆಯ ಹಂತವಾಗಿ ವ್ಯಾಧಿಯಿಂದ ಬಳಲಿರುವ ಶರೀರಕ್ಕೆ ಬಲವನ್ನು ಕೊಡಲು ಮತ್ತು ರೋಗದ ಪುನರಾವರ್ತನೆಯನ್ನು ತಡೆಗಟ್ಟಲು ಲೇಹ್ಯಗಳನ್ನು ಉಪಯೋಗಿಸಲಾಗುತ್ತದೆ. ಈ ಹಿನ್ನಲೆಯಲ್ಲಿ  ಚ್ಯವನಪ್ರಾಶವನ್ನೂ ಕೂಡ ಸೂಕ್ತ ವಿವೇಚನೆಯ ನಂತರ ಸೇವಿಸಬೇಕು.

ಯಾರು ಮತ್ತು ಹೇಗೆ ಸೇವಿಸಬಹುದು ?

ಯಾವುದೇ ಲೇಹ್ಯವನ್ನು ಸೇವಿಸುವ ಮುನ್ನ ಅಗ್ನಿ ಅಥವಾ ಜೀರ್ಣಶಕ್ತಿ ಸರಿಯಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ರೋಗದ ಪ್ರಥಮ ಹಂತದ ಚಿಕಿತ್ಸೆಯನ್ನು ಪಡೆದು  ನಂತರ ಲೇಹ್ಯವನ್ನು ಬಳಸಲು ತೊಡಗುವುದು ಸೂಕ್ತ.

ಒಂದರಿಂದ ಎರಡು ಚಮಚ ಚ್ಯವನಪ್ರಾಶ ಲೇಹ್ಯವನ್ನು ಬೆಳಿಗ್ಗೆ ಮತ್ತು ಸಂಜೆ ಆಹಾರದ ನಂತರ ಸೇವಿಸಿ ಬಿಸಿ ಹಾಲು ಸೇವಿಸುವುದು ಆರೋಗ್ಯವಂತನಲ್ಲಿ ಉತ್ತಮ. ಆದರೆ ಆಯಾ ವ್ಯಕ್ತಿಯ ಆರೋಗ್ಯ ಸಮಸ್ಯೆಗಳಿಗೆ ತಕ್ಕಂತೆ ಬಳಕೆಯ ಪ್ರಮಾಣ – ಕಾಲಗಳಲ್ಲಿ ಸೂಕ್ತ ಬದಲಾವಣೆಗಳೊಂದಿಗೆ ವೈದ್ಯರು ಸೂಚಿಸಬಹುದು.

ಮೇಲೆ ವಿವರಿಸಿದ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಆಯುರ್ವೇದ ಔಷಧವನ್ನು ತೆಗೆದುಕೊಳ್ಳುವ ಮುನ್ನ ನಿಮ್ಮ ಸಮೀಪದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಮತ್ತು ಸೂಚನೆಗಳನ್ನು ಅನುಸರಿಸುವುದು ಉತ್ತಮ. ಮಾರುಕಟ್ಟೆಯಲ್ಲಿರುವ ಯಾವ ತಯಾರಕರ ಚ್ಯವನಪ್ರಾಶವು ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ವೈದ್ಯರೊಂದಿಗೆ ಸಮಾಲೋಚಿಸಿ ಉಪಯೋಗಿಸುವುದು ಒಳಿತು.

ಡಾ. ಶಿಲ್ಪಾ. ಎಸ್.ಎನ್. ಎಂ.ಡಿ. (ಆಯು)

ಸೀನಿಯರ್ ಕನ್ಸ್ ಲ್ ಟೆ೦ಟ್,  ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರ,   ಮೈಸೂರು