ವಿರುದ್ಧಾಹಾರ

– ಡಾ. ಪ್ರಸನ್ನ ವೆಂಕಟೇಶ್

(ಶ್ರೀರಾಮಚಂದ್ರಾಪುರ ಮಠದ ಧರ್ಮಭಾರತೀ ಮಾಸಪತ್ರಿಕೆಯಲ್ಲಿ 2017 ಫೆಬ್ರುವರಿ ತಿಂಗಳ ಸಂಚಿಕೆಯಲ್ಲಿ ಆಹಾರ ಕುರಿತಾಗಿ ಪ್ರಕಟಿತವಾದ ಲೇಖನ)

|| ಶ್ರೀಗುರವೇ ನಮಃ ||

ಜಗತ್ತಿನಾದ್ಯಂತ ವಿಜ್ಞಾನವು ಮುಂದುವರೆದಂತೆ ಎಲ್ಲ ಕ್ಷೇತ್ರಗಳಲ್ಲಿ ಹೊಸ ಹೊಸ ಅನ್ವೇಷಣೆಗಳು ಅತಿವೇಗವಾಗಿ ನಿರಂತರವಾಗಿ, ನಡೆಯುತ್ತಲಿವೆ.  ವೈದ್ಯಕ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಒಂದು ಆರೋಗ್ಯಸಮಸ್ಯೆಗೆ ಔಷಧೀ / ಚಿಕಿತ್ಸಾರೂಪದ ಪರಿಹಾರವೊಂದನ್ನು ಕಂಡುಹಿಡಿದೆವು ಎನ್ನುವಷ್ಟರಲ್ಲಿ ಮನುಕುಲಕ್ಕೇ ಅಪಾಯ ತಂದೊಡ್ಡಬಲ್ಲ ಮತ್ತೊಂದು ರೋಗ ಬರುತ್ತಿರುವುದನ್ನೂ ನೋಡುತ್ತಿದ್ದೇವೆ. ಜೊತೆಯಲ್ಲಿ ಕೆಲವು ದಶಕಗಳ ಹಿಂದೆ ಯಾವುದೇ ಆರೋಗ್ಯ ಸಮಸ್ಯೆಗೆ ಕೇವಲ ಔಷಧ / ಚಿಕಿತ್ಸೆ ಮಾತ್ರ ಪರಿಹಾರ ; ಆಹಾರ ರೂಪದ ಯಾವ ನಿಯಮವೂ ಬೇಕಾಗಿಲ್ಲ ಎಂಬ ಪ್ರಬಲ ವಾದವನ್ನು ಮಂಡಿಸುತ್ತಿದ್ದ ಹೆಚ್ಚಿನೆಲ್ಲ ಆರೋಗ್ಯಶಾಸ್ತ್ರಗಳ ತಜ್ಞರು ಇತ್ತೀಚಿನ ವರ್ಷಗಳಲ್ಲಿ ಆಹಾರದ ಕುರಿತಾಗಿ ಅನೇಕಾನೇಕ ಪ್ರಯೋಗಗಳನ್ನು ಮಾಡಲು ಪ್ರಾರಂಭಿಸಿರುವುದೂ ಗಮನಕ್ಕೆ ಬರುತ್ತದೆ.

ಜನಪದದಲ್ಲಿ ಗಾದೆಯೊಂದು ಹೇಳುತ್ತದೆ – “ ಊಟ ಬಲ್ಲವನಿಗೆ ರೋಗವಿಲ್ಲ ” ಎಂದು. ಆದರೆ ಇಂದು ಸಮಾಜದಲ್ಲಿ ರೋಗಿಗಳ, ಖಾಯಿಲೆಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಾವು ರೂಢಿಸಿಕೊಂಡಿರುವ ಆಹಾರಕ್ರಮದ ಬಗ್ಗೆ ಒಮ್ಮೆ ನಮ್ಮಲ್ಲೇ ಪ್ರಶ್ನೆ ಮೂಡದಿರದು. ಇಂದು ಮಾಧ್ಯಮಗಳು ಪ್ರಬಲವಾಗಿ ಬೆಳೆದಿರುವುದರಿಂದ ಜಗತ್ತಿನ ಮೂಲೆ-ಮೂಲೆಗಳ ಆಹಾರದ ರೀತಿ, ನೀತಿಗಳೆಲ್ಲ ಕೈಬೆರಳಿನ ತುದಿಯಲ್ಲಿ ಲಭ್ಯ. ಈ ಕಾರಣದಿಂದಾಗಿಯೇ ನಮ್ಮ ದೇಶದ / ನಾಡಿನ ಬೇರೆ-ಬೇರೆ ಪ್ರದೇಶಗಳಲ್ಲಿ ಪಾರಂಪರಿಕವಾಗಿ ರೂಢಿಯಲ್ಲಿಟ್ಟುಕೊಂಡು ಬಂದಿದ್ದ ಆಹಾರಕ್ರಮಗಳನ್ನೆಲ್ಲಾ ಕ್ರಮೇಣ ಬದಿಗೊತ್ತುತ್ತಾ ವಿದೇಶೀ ಚಿಂತನೆಯ ಹೊಸ ಆಹಾರಕ್ರಮ ನಮ್ಮ ಮನೆ – ಮನದೊಳಗೆ ಇಳಿಯುತ್ತಿರುವುದನ್ನು ಕಂಡಾಗ ಸಹಜವಾಗಿಯೇ ಚಿಂತಕರಲ್ಲಿ ಈ ಪ್ರಶ್ನೆ ಮೂಡುತ್ತದೆ.

ಈ ಕುರಿತಾಗಿ ನಮ್ಮ ದೇಶೀಯ ಆರೋಗ್ಯಶಾಸ್ತ್ರ “ಆಯುರ್ವೇದ” ಏನು ಹೇಳುತ್ತದೆ ಎಂಬುದನ್ನು ಗಮನಿಸಹೊರಟರೆ ಸಖೇದ – ಆಶ್ಚರ್ಯವಾಗುತ್ತದೆ. ಏಕೆಂದರೆ ತಮ್ಮ ಜ್ಞಾನಚಕ್ಷುಸ್ಸಿನಿಂದ ಈ ಸೃಷ್ಟಿಯ ಮರ್ಮವನ್ನು ಅರ್ಥೈಸಿಕೊಂಡ ಸನಾತನಾರ್ಯಭಾರತ ಮಹರ್ಷಿಗಳು ಸಹೃದಯರಾಗಿ ನೀಡಿದ ಅತ್ಯಮೂಲ್ಯ ನೋಟಗಳನ್ನು, ವಿವರಣೆಗಳನ್ನು ಬದಿಗೊತ್ತುತ್ತಿದ್ದೇವೆ ಮಾತ್ರವಲ್ಲದೇ ಅನೇಕ ಕಡೆಗಳಲ್ಲಿ ಅಲ್ಪಮತಿಯಿಂದಲೋ, ಸ್ವಾರ್ಥದಿಂದಲೋ  ರೂಪಿಸಿದ ಅಥವಾ ಬೇರಾವುದೋ ದೇಶ – ಕಾಲಗಳಲ್ಲಿ ಅನ್ವಯಿಸಬಹುದಾದ ಆಹಾರನಿಯಮಗಳನ್ನು ಹಿಂದೆ-ಮುಂದೆ ಆಲೋಚಿಸದೆ ನಮ್ಮಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಇಂದು ಹಲವಾರು ಮಾಧ್ಯಮಗಳಲ್ಲಿ ತೋರಿಸುತ್ತಿರುವ ವಿವಿಧ ಬಗೆಯ ಆಹಾರ ತಯಾರಿಕೆ ಮತ್ತು ಬಳಕೆಯ ವಿಧಿ-ವಿಧಾನಗಳನ್ನು  ಆಯುರ್ವೇದದ ನೇರದಲ್ಲಿ ಗಮನಿಸಿದಾಗ ಜನರಿಗೆ ತಪ್ಪು ಮಾಹಿತಿ – ಮಾರ್ಗದರ್ಶನ ದೊರೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಹಾಗಾದರೆ ಈ ವಿಷಯಗಳಲ್ಲಿ ಆಯುರ್ವೇದದ ನೋಟವನ್ನು ಗಮನಿಸುವುದಾದರೆ, ಆಹಾರ ಪದಾರ್ಥಗಳ ಆಯ್ಕೆ – ಸಂಯೋಗ – ತಯಾರಿಕಾ ವಿಧಾನ – ಬಳಕೆಯ ವಿಧಾನ ಇವೆಲ್ಲದರ ಕುರಿತು ಚರಕ, ಸುಶ್ರುತರೇ ಮೊದಲಾದ ಆಚಾರ್ಯರು ಸಾವಿರಾರು ವರ್ಷಗಳ ಹಿಂದೆಯೇ ಅತ್ಯಂತ ಸೂಕ್ಷ್ಮವಾದ, ಆಳವಾದ ನೋಟವನ್ನು ನೀಡಿರುತ್ತಾರೆ.

ಆಯುರ್ವೇದ ಆಚಾರ್ಯರು ನಾವು ದಿನನಿತ್ಯದಲ್ಲಿ ಬಳಸುವ ಎಲ್ಲ ಆಹಾರ ಪದಾರ್ಥಗಳ ಗುಣ – ಕರ್ಮ ಇತ್ಯಾದಿ ಎಲ್ಲ ವಿವರಣೆಯನ್ನು ಕ್ರಮಕ್ರಮವಾಗಿ ನೀಡುತ್ತಾ ಬಂದಿದ್ದಾರೆ. ಪ್ರತಿಯೊಬ್ಬನಿಗೂ ಅತ್ಯಂತ ಅವಶ್ಯಕವಾದ ನೀರಿನಿಂದ ಪ್ರಾರಂಭಿಸಿ, ಹಾಲು ಮತ್ತು ಹಾಲಿನ ಉತ್ಪನ್ನಗಳು, ಎಣ್ಣೆಗಳು ಹೀಗೆ ಬೇರೆಬೇರೆ ವಿಭಾಗಗಳಲ್ಲಿ  ದ್ರವಪದಾರ್ಥಗಳ ಗುಣಧರ್ಮವನ್ನು ವಿವರಿಸಿದ್ದಾರೆ. ಮುಂದೆ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ತರಕಾರಿ – ಸೊಪ್ಪುಗಳು, ಸಂಬಾರ ಪದಾರ್ಥಗಳು, ಹಣ್ಣುಗಳು ಹೀಗೆ ಆಹಾರ ಪದಾರ್ಥಗಳ ವಿವರಣೆಗಳನ್ನು ನೀಡಿದ ನಂತರದಲ್ಲೆ ಈ ಪದಾರ್ಥಗಳಿಂದ ಆಹಾರ ತಯಾರಿಕೆಗಳನ್ನು, ಬಳಕೆಯ ವಿಧಿ – ವಿಧಾನಗಳನ್ನು ಕುರಿತು ವಿವರಿಸುತ್ತಾರೆ.

ಹಾಗಾದರೆ ಈ ಎಲ್ಲ ವಿವರಣೆಗಳ ಹಿಂದಿರುವ ನೋಟ ಏನು ಎಂದರೆ ಅದನ್ನು ನಮ್ಮ ದೇಹದಲ್ಲಿನ “ಅಗ್ನಿ” ಎನ್ನುತ್ತಾರೆ. ಹಾಗಾದರೆ ಅಗ್ನಿ ಎಂದರೇನು ? ಎಂದು ಗಮನಿಸಿದರೆ – ಹೊರಪ್ರಪಂಚದಲ್ಲಿ ತನ್ನ ಸಂಪರ್ಕಕ್ಕೆ ಬರುವ ಯಾವುದೇ ಪದಾರ್ಥವನ್ನು ಬೇಯಿಸಿ, ರೂಪಾಂತರ ಮಾಡುವ ಬೆಂಕಿಯಂತೆ – ನಾವು ಸೇವಿಸುವ ಆಹಾರವನ್ನು ಹಲವು ಹಂತಗಳಲ್ಲಿ ಪಾಕಮಾಡಿ, ಬೇಡವಾದ ಕಲ್ಮಶಗಳನ್ನು ಬೇರ್ಪಡಿಸಿ, ಸಾರಭಾಗವನ್ನು ಶರೀರಕ್ಕೆ ನೀಡುವ ಉಷ್ಣಶಕ್ತಿಯೇ ಅಗ್ನಿ. ಹೊರಪ್ರಪಂಚದಲ್ಲಿ ಅಗ್ನಿಯ ಅಸ್ತಿತ್ವಕ್ಕೆ, ಸಮತೋಲನಕ್ಕೆ ಗಾಳಿ, ಬೆಂಕಿ, ಇಂಧನ ಹೇಗೆ ಕಾರಣವಾಗುತ್ತವೆಯೋ ಹಾಗೆ ನಮ್ಮ ಈ ಶರೀರದಲ್ಲಿ ವಾತ – ಪಿತ್ತ – ಕಫಗಳೆಂಬ ತ್ರಿದೋಷಗಳು ಈ ಅಗ್ನಿಯ ಅಸ್ತಿತ್ವಕ್ಕೆ, ಸಮತೋಲನಕ್ಕೆ ಕಾರಣವಾಗುತ್ತವೆ

ಇಂತಹ ಅಗ್ನಿಯು ಸಾಮಾನ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆಯಾ ವ್ಯಕ್ತಿಯ ಪ್ರಕೃತಿ, ವಯಸ್ಸು, ವಾಸಮಾಡುವ ದೇಶ, ಕಾಲ ಇತ್ಯಾದಿ ಅನೇಕ ಅಂಶಗಳ ಆಧಾರದ ಮೇಲೆ ನಿರ್ಧಾರಿತವಾಗುತ್ತದೆ. ಅಗ್ನಿಯ ಸಮತೋಲನವನ್ನು ಕಾಪಾಡುವ ಸಲುವಾಗಿ ಆಯುರ್ವೇದ ಅನೇಕ ನಿಯಮಗಳನ್ನು ತಿಳಿಸುತ್ತದೆ.

 

  1. ಆಹಾರಪದಾರ್ಥಗಳ ಆಯ್ಕೆ :

  • ಪ್ರಧಾನವಾಗಿ ಗುಣ ಮತ್ತು ಪ್ರಮಾಣಗಳಲ್ಲಿ ಲಘುವಾಗಿರಬೇಕು ; (ಉದಾಃ – ಕುದಿಸಿದ ನೀರು, ಅನ್ನ, ಹೆಸರು (ಕಾಳು / ಬೇಳೆ) ಇತ್ಯಾದಿಗಳು ಲಘು. ಅಂತೆಯೇ ಬಾರ್ಲಿ, ಉದ್ದು, ಎಮ್ಮೆಯಹಾಲು, ಹಿಟ್ಟುಗಳು, ಇತ್ಯಾದಿಗಳು ಜೀರ್ಣಕ್ಕೆ ಜಡ)
  • ಸ್ನಿಗ್ಧವಾಗಿರಬೇಕು. ಎಂದರೆ ಸ್ವಲ್ಪ ಜಿಡ್ಡಿನಿಂದ ಕೂಡಿರಬೇಕು.
  • ಶರೀರದ ವಾತ – ಪಿತ್ತ – ಕಫ ಎಂಬ ತ್ರಿದೋಷಗಳ ಸಾಮ್ಯತೆ ಕಾಪಾಡಬೇಕು, ಅಂತೆಯೇ ಸತ್ವ – ರಜ – ತಮಸ್ ಗಳೆಂಬ ತ್ರಿಗುಣಗಳನ್ನು ಕೆರಳಿಸಬಾರದು.
  1. ಆಹಾರಪದಾರ್ಥಗಳ ಸಂಯೋಗ :

ಇಂದು ನಾವೆಲ್ಲ ಗಮನಿಸುವಂತೆ ಎರಡು ಅಥವಾ ಹೆಚ್ಚು ಪದಾರ್ಥಗಳನ್ನು ಸೇರಿಸುವಾಗ ಏನೊಂದೂ ಯೋಚಿಸದೇ ಅವಗಳ ಸಂಯೋಗ ಮಾಡುವುದನ್ನು ಮಾಧ್ಯಮಗಳೂ ಸೇರಿದಂತೆ ಎಲ್ಲೆಡೆಯೂ ನೋಡುತ್ತೇವೆ. ಕೇವಲ ನಾಲಿಗೆಯ ರುಚಿ, ಕೆಲವೊಮ್ಮೆ ಹೊಸತೇನನ್ನೋ ತೋರಿಸುವ ಆತುರ ಅದರ ಹಿಂದೆ ಕಾಣಿಸುತ್ತದೆ. ಆದರೆ ಚರಕ, ಸುಶ್ರುತರೇ ಮೊದಲಾದ ಆಯುರ್ವೇದ ಆಚಾರ್ಯರು ವಿವರಿಸುವಂತೆ ಪದಾರ್ಥಗಳು ಅನೇಕ ರೀತಿಯಲ್ಲಿ ಪರಸ್ಪರ ವಿರುದ್ಧವಾಗಿರಬಹುದು. ಉದಾಃ –

  1. ದೇಶವಿರುದ್ಧ – ಒಣಭೂಮಿಯಲ್ಲಿ ವಾಸಮಾಡುವ ವ್ಯಕ್ತಿ ಒಣಗಿದ, ಬಾಡಿದ ಅಂತೆಯೇ ತೀಕ್ಷ್ಣವಾದ ಆಹಾರ ಪದಾರ್ಥಗಳ ಸೇವನೆ ಮಾಡುವುದು
  2. ಕಾಲವಿರುದ್ಧ – ಅತ್ಯಂತ (ಸುಡು) ಬೇಸಿಗೆಯಲ್ಲಿ ಉಷ್ಣವಾದ ಮತ್ತು ಅತಿಖಾರವಾದ ಪದಾರ್ಥಗಳ ಸೇವನೆ
  3. ಅಗ್ನಿವಿರುದ್ಧ – ಜೀರ್ಣಶಕ್ತಿ ಕುಂಠಿತವಾಗಿದ್ದು ಹಸಿವೆ, ಆಹಾರದಲ್ಲಿ ರುಚಿ ಇಲ್ಲದಿರುವಾಗ ಹಾಲು, ಮೊಸರು ಇತ್ಯಾದಿ ಜೀರ್ಣಕ್ಕೆ ಜಡವಾದ ಆಹಾರಪದಾರ್ಥಗಳ ಸೇವನೆ.
  4. ಮಾತ್ರಾವಿರುದ್ಧ – ತುಪ್ಪ ಮತ್ತು ಜೇನುತುಪ್ಪಗಳ ಸಮಪ್ರಮಾಣದ ಮಿಶ್ರಣದ ಸೇವನೆ
  5. ಸಾತ್ಮವಿರುದ್ಧ – ಸಾತ್ಮ್ಯ ಎಂದರೆ ದೀರ್ಘಕಾಲದಿಂದ ಒಂದು ಪದಾರ್ಥವನ್ನು ಬಳಸಿ ಶರೀರಕ್ಕೆ ಒಗ್ಗಿಸಿಕೊಂಡಿರುವುದು ಎಂದು. ಹಾಗೆ ಒಂದೊಮ್ಮೆ ದೀರ್ಘಕಾಲದಿಂದ ಖಾರವಾದ ಆಹಾರಪದಾರ್ಥ ಬಳಸುತ್ತಿದ್ದು ಇದ್ದಕ್ಕಿದ್ದಂತೆ ಅದನ್ನು ತ್ಯಜಿಸಿ ಸಿಹಿಪದಾರ್ಥಗಳನ್ನು (ಮಧುರ ರಸವನ್ನು) ಬಳಸಲು ಪ್ರಾರಂಭಿಸುವುದು.
  6. ದೋಷವಿರುದ್ಧ – ಒಂದೊಮ್ಮೆ ಶರೀರದಲ್ಲಿ ವಾತ ಕೆರಳಿದ್ದು ಅಂತಹ ಸಂದರ್ಭದಲ್ಲಿ ಪುನಃ ವಾತವನ್ನು ಕೆರಳಿಸುವ ಆಹಾರವನ್ನು ಬಳಸುವುದು. ಉದಾಃ – ಇಂದು ಸಾಮಾನ್ಯವಾಗಿ ಗಮನಿಸುವಂತೆ ಶರೀರದಲ್ಲಿ ವಾತಸಂಬಂಧೀ ಸಮಸ್ಯೆಗಳಾದ ನೋವುಗಳೇ ಮುಂತಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಬಟಾಣಿ, ಅವರೆ ಇತ್ಯಾದಿ ಕಾಳುಗಳ ಬಳಕೆ ಮಾಡುವುದು. ಇವುಗಳಿಂದ ಈಗಾಗಲೇ ಕೆರಳಿರುವ ದೋಷಗಳು ಇನ್ನಷ್ಟು ಕೆರಳಿ ದೊಡ್ಡಪ್ರಮಾಣದಲ್ಲಿ ಆರೋಗ್ಯಸಮಸ್ಯೆಯನ್ನು ಉಂಟುಮಾಡಬಲ್ಲವು.
  7. ಸಂಸ್ಕಾರವಿರುದ್ಧ – ಸಂಸ್ಕಾರ ಎಂದರೆ ಅತ್ಯಂತ ಸರಳವಾಗಿ ಹೇಳುವುದಾದರೆ ಬಳಸುವ ಪದಾರ್ಥದ ದೋಷವನ್ನು ಹೋಗಲಾಡಿಸಿ, ಅದರಲ್ಲಿನ ಉತ್ತಮಗುಣಗಳನ್ನು ವೃದ್ಧಿಪಡಿಸುವುದು. ಉದಾಹರಣೆಗೆ – ಅಕ್ಕಿ ಜೀರ್ಣಕ್ಕೆ ಜಡವಾದ ಪದಾರ್ಥ. ಆದರೆ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿದಾಗ ಅದು ಜೀರ್ಣಕ್ಕೆ ಲಘುವಾಗುತ್ತದೆ. ಅದಕ್ಕೆ ಬದಲಾಗಿ ಮುಚ್ಚಿದ ಪಾತ್ರೆಯಲ್ಲಿ / ಕುಕ್ಕರ್ ನಲ್ಲಿ ಅನ್ನವನ್ನು ತಯಾರಿಸುವುದರಿಂದ ಅನ್ನ ಜೀರ್ಣಕ್ಕೆ ಜಡವಾಗುತ್ತದೆ ; ಅಂತೆಯೇ ಹಾಲು ಒಡೆಸಿ ಮಾಡುವ ಪದಾರ್ಥಗಳಾದ ಪನೀರ್ ರಸಗುಲ್ಲ ಇತ್ಯಾದಿ ಪದಾರ್ಥಗಳು ಜೀರ್ಣಕ್ಕೆ ಜಡವಾಗುತ್ತವೆ.

ಉಷ್ಣ, ತೀಕ್ಷ್ಣ ಗುಣಗಳನ್ನು ಹೊಂದಿರುವ ಹಿಂಗು (ಇಂಗು), ಬೆಳ್ಳುಳ್ಳಿ ಮೊದಲಾದ ಪದಾರ್ಥಗಳನ್ನು ತುಪ್ಪದಲ್ಲಿ ಹುರಿದಾಗ ಅವುಗಳ ಭೌತಿಕ ದೋಷ ನಿವಾರಣೆಯಾಗಿ ಗುಣವೃದ್ದಿಯಾಗುತ್ತದೆ. ಆದರೆ ಅದಕ್ಕೆ ಬದಲಾಗಿ ಎಣ್ಣೆಯಲ್ಲಿ ಹುರಿದಾಗ ಲಾಭ ಕಡಿಮೆ, ನಷ್ಟ ಜಾಸ್ತಿ.

  1. ವೀರ್ಯವಿರುದ್ಧ – ಹಾಲು ತಂಪು ಎನ್ನುತ್ತೇವೆ. ಅದನ್ನು ಉಷ್ಣವೀರ್ಯ ಹೊಂದಿದಂತಹ ಉಪ್ಪಿನೊಡನೆ ಮಿಶ್ರಮಾಡುವುದು ವೀರ್ಯವಿರುದ್ಧ ಎನಿಸಿಕೊಳ್ಳುತ್ತದೆ.
  2. ಕೋಷ್ಠವಿರುದ್ಧ – ಯಾವಾಗಲೂ ಒಣಗಿದ, ಗಟ್ಟಿ ಮಲವನ್ನು ವಿಸರ್ಜಿಸುವ (dry & hard stools) ವ್ಯಕ್ತಿಗೆ ಜೀರ್ಣಕ್ಕೆ (ಪ್ರಮಾಣದಲ್ಲಿ ಮತ್ತು ಗುಣದಲ್ಲಿ) ಅತ್ಯಂತ ಲಘುವಾದ ಆಹಾರವನ್ನು ನೀಡುವುದು ; ಅಂತೆಯೇ ಆಹಾರದಲ್ಲಿ ಹಾಲು, ದ್ರಾಕ್ಷಿ ಇತ್ಯಾದಿ ಪದಾರ್ಥಗಳನ್ನು ಸೇವಿಸುವುದರಿಂದಲೇ ದ್ರವಮಲ ಪ್ರವೃತ್ತಿ (ಭೇದಿ) ಉಂಟಾಗುವ ವ್ಯಕ್ತಿಗೆ ಜೀರ್ಣಕ್ಕೆ ಜಡವಾದ (ಗುರು) ಆಹಾರಪದಾರ್ಥಗಳನ್ನು ನೀಡುವುದು ಇವುಗಳು ಆಯಾ ವ್ಯಕ್ತಿಗಳ ಜೀರ್ಣಾಂಗವ್ಯೂಹದ, ಕರುಳಿನ ವ್ಯವಸ್ಥೆಗೆ ವಿರುದ್ಧವಾದದ್ದಾಗಿರುತ್ತವೆ.
  3. ಅವಸ್ಥಾವಿರುದ್ಧ – ಅತಿಯಾದ ಶಾರೀರಿಕ ಶ್ರಮ, ವ್ಯಾಯಾಮ, ಮೈಥುನದ ನಂತರ ಶರೀರಕ್ಕೆ ಆಯಾಸ ಆಗಿರುತ್ತದೆಯಾದ್ದರಿಂದ ವಿಶ್ರಾಂತಿ ನೀಡಬೇಕು, ಆಹಾರದಲ್ಲಿ ವಾಯುವನ್ನು ಕಡಿಮೆಮಾಡುವ ಆಹಾರಗಳನ್ನು ನೀಡಬೇಕು. ಅದಕ್ಕೆ ಬದಲಾಗಿ ವಾತವನ್ನು ಕೆರಳಿಸುವ ಆಹಾರಗಳನ್ನು (ಬೇಳೆ-ಕಾಳು, ಖಾರಪದಾರ್ಥ, ಒಣಪದಾರ್ಥ) ಸೇವಿಸುವುದು ಅವಸ್ಥಾವಿರುದ್ದ ಎನಿಸಿಕೊಂಳ್ಳುತ್ತದೆ ; ಅದೇ ರೀತಿ ನಿದ್ರೆಮಾಡಿ ಎದ್ದ ನಂತರೆ ಶರೀರದಲ್ಲಿ ಕಫವನ್ನು ಹೆಚ್ಚಿಸುವ ಹಾಲು / ಎಣ್ಣೆಯಲ್ಲಿ ಕರೆದ ಪದಾರ್ಥಗಳು / ಸಿಹಿಪದಾರ್ಥಗಳ ಸೇವನೆ ಶರೀರದ ಅವಸ್ಥಾವಿರುದ್ಧ ಎನಿಸಿಕೊಳ್ಳುತ್ತದೆ.
  4. ಕ್ರಮವಿರುದ್ದ – ಆಯುರ್ವೇದಶಾಸ್ತ್ರದ ಪ್ರತಿ ವಿವರಣೆಯೂ ಮೂರು ದೋಷಗಳ ಮೇಲೆಯೇ ಆಧಾರಿತವಾಗಿದೆ.
  • ಆಹಾರಸೇವನೆಯ ಸಂದರ್ಭದಲ್ಲಿ ಮಲ-ಮೂತ್ರಾದಿ ಯಾವುದೇ ವೇಗ (natural urge) ಇರಬಾರದು.
  • ಆಹಾರ ಸೇವನೆಯ ವಿಚಾರದಲ್ಲೂ ಯಾವಯಾವ ದೋಷಗಳು ಯಾವಯಾವ ಸಂದರ್ಭಗಳಲ್ಲಿ ಹೆಚ್ಚು / ಕಡಿಮೆಯಾಗುತ್ತವೆ ಎಂಬುದನ್ನು ಆಳವಾಗಿ ಗಮನಿಸಿರುವ ನಮ್ಮ ಆಚಾರ್ಯರುಗಳು ಅದಕ್ಕೆ ತಕ್ಕಂತೆ ಆಹಾರಸೇವನೆಯ ಕ್ರಮವನ್ನು ನಿರ್ದೇಶಿಸಿರುತ್ತಾರೆ. ಉದಾಃ – ಆಹಾರಸೇವನೆಯ ಪ್ರಾರಂಭದಲ್ಲಿ ಕಫದೋಷ ಬಲಿಷ್ಠವಾಗಿದ್ದಲ್ಲಿ ಆಹಾರದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ. ಹಾಗಾಗಿ ಕಫಕ್ಕೆ ಬಲ ಕೊಡುವ ಸಲುವಾಗಿ ಸಿಹಿ ಪ್ರಧಾನವಾದ ಆಹಾರಪದಾರ್ಥಗಳಿಗೆ ಪ್ರಾಶಸ್ತ್ಯ. ಅಂತೆಯೇ ಕೊನೆಯಲ್ಲಿ ವಾತ ಬಲಿಷ್ಠವಾಗಿರಬೇಕು. ಹಾಗಾಗಿ ರಸ, ಗುಣ, ವಿಪಾಕಗಳಲ್ಲಿ ವಾತವನ್ನು ಹತೋಟಿಯಲ್ಲಿಟ್ಟು ಅದರ ಪ್ರಾಕೃತ ಬಲವನ್ನು ಹೆಚ್ಚಿಸುವ ಕಡೆದ ಮಜ್ಜಿಗೆಗೆ ಪ್ರಾಶಸ್ತ್ಯ. ಮಧ್ಯದಲ್ಲಿ ಎಲ್ಲ ಆರು ರಸಗಳನ್ನು ಬಳಸಿ ತಯಾರಿಸಿದ ಅನೇಕ ವಿಧದ ಭಕ್ಷ್ಯ, ಭೋಜ್ಯ, ಚೋಷ್ಯ, ಲೇಹ್ಯ, ಪೇಯಾದಿ ವಿವಿಧ ಪದಾರ್ಥಗಳನ್ನು ಬಳಸುವ ಕ್ರಮವನ್ನು ಆದೇಶಿಸಿರುತ್ತಾರೆ.

ಆದರೆ ಇಂದು ನಮ್ಮ ಅಜ್ಞಾನದಿಂದಾಗಿ ಅನೇಕಬಾರಿ ಮಲಮೂತ್ರಾದಿ ವೇಗಗಳಿದ್ದಾಗಲೇ ಆಹಾರ ಸೇವನೆಯನ್ನು ಮಾಡುತ್ತೇವೆ ; ಆಹಾರದ ಪ್ರಾರಂಭದಲ್ಲಿ ಕಟು (ಖಾರ) ರಸದಿಂದ ಕೂಡಿರುವ ಹಲವು ವಿಧದ ಸೂಪ್ ಗಳನ್ನು ಸೇವಿಸುವುದು, ಕೊನೆಯಲ್ಲಿ ice-cream ಬಳಸುವುದು ಇತ್ಯಾದಿ ಕಾರಣಗಳು ಕಫ – ವಾತಗಳನ್ನು ದುಷ್ಟಿಗೊಳಿಸುತ್ತವೆ.

  1. ಪರಿಹಾರವಿರುದ್ಧ – ಇಂದಿನ ಅನೇಕ ಸಮಾರಂಭಗಳಲ್ಲಿ ಹೊಸತೇನನ್ನೋ ಮಾಡುವ ಭರಾಟೆಯಲ್ಲಿ ಬಿಸಿಚಾಕೋಲೇಟ್ ಹಾಗೂ ಐಸ್ ಕ್ರೀಂಗಳನ್ನು ಒಟ್ಟಿಗೆ ಬಳಸುವುದು ; ಬಿಸಿಹಲ್ವದ ಜೊತೆಯಲ್ಲಿ ಐಸ್ ಕ್ರೀಂ ಬಳಸುವುದು ; ಜಾಮೂನ್ ಜೊತೆಯಲ್ಲಿ ಐಸ್ ಕ್ರೀಂ ಬಳಸುವುದು ಇತ್ಯಾದಿಗಳನ್ನು ಗಮನಿಸುತ್ತೇವೆ. ಆದರೆ ಆಯುರ್ವೇದ ವಿವರಿಸುವಂತೆ ಯಾವುದೇ ಪದಾರ್ಥ ಬಳಸಿದ ನಂತರ ಒಳಗಿನ ಅಗ್ನಿಯ ಮೇಲೆ ಆ ಪದಾರ್ಥಸೇವನೆಯಿಂದ ಆಗುವ ಪರಿಣಾಮವನ್ನು ಸರಿದೂಗಿಸಲು ಸಮರ್ಥವಾದ ಇನ್ನೊಂದು ಪದಾರ್ಥ ಬಳಸಬೇಕಾಗುತ್ತದೆ. ಉದಾಹರಣೆಗೆ ಬಿಸಿಹಲ್ವ ಬಳಸಿದ ನಂತರ ಅದರ ಜೀರ್ಣಕ್ರಿಯೆ ಸುಗಮವಾಗಿ ಆಗಲು ಬೆಚ್ಚನೆಯ ನೀರು ಬಳಸುವುದು ಆರೋಗ್ಯಕರ. ಅಂತೆಯೇ ಉಳಿದವುಗಳನ್ನೂ ಅರ್ಥಮಾಡಿಕೊಳ್ಳಬೇಕು.
  2. ಉಪಚಾರವಿರುದ್ಧ – ಔಷಧಯುಕ್ತ / ಸಾದಾ ಘೃತ(ತುಪ್ಪ)ವನ್ನು ಸೇವನೆ ಮಾಡಿದಾಗ ಅದರ ಸುಖವಾದ ಜೀರ್ಣಕ್ರಿಯೆಗಾಗಿ ಬಿಸಿನೀರಿನ ಸೇವನೆ ಆರೋಗ್ಯಕರ. ಬದಲಾಗಿ ತಣ್ಣೀರನ್ನು ಸೇವಿಸುವುದು ವಿರುದ್ಧ ಮತ್ತು ಅನಾರೋಗ್ಯಕರ.
  3. ಪಾಕವಿರುದ್ಧ – ದೋಷಯುಕ್ತ ಪಾತ್ರೆಯಿಂದ ಸಿದ್ಧವಾದ ಅನ್ನ ಅನಾರೋಗ್ಯಕರ.

ಅಂತೆಯೇ ಅರ್ಧಪಕ್ವವಾದ / ಅಪಕ್ವವಾದ / ಅತಿಪಕ್ವವಾದ ಅನ್ನ ;

ಅರೆಬೆಂದ ತರಕಾರಿಗಳು / ಇತರ ಪದಾರ್ಥಗಳನ್ನು ಈ ಕಾರಣದಿಂದಾಗಿ ಅನಾರೋಗ್ಯಕರ ಎನ್ನುತ್ತಾರೆ.

  1. ಸಂಯೋಗವಿರುದ್ಧ – ಹುಳಿಪದಾರ್ಥಗಳ ಜೊತೆ ಹಾಲಿನ ಸೇವನೆ ; ಅನೇಕ ಮನೆಗಳಲ್ಲಿ (ರಾತ್ರೆಯ ಆಹಾರಕ್ಕೆ) ಮಜ್ಜಿಗೆ / ಮೊಸರು ಹುಳಿಯಾಯಿತೆಂದು ಅದಕ್ಕೆ ಹಾಲನ್ನು ಸೇರಿಸುವುದು.
  2. ಹೃದಯವಿರುದ್ಧ ತನಗೆ ಇಷ್ಟವಿಲ್ಲದ ಆಹಾರಪದಾರ್ಥಗಳನ್ನು ಇತರರ ಒತ್ತಾಯಕ್ಕೆ ಸೇವಿಸುವುದು.
  3. ಸಂಪದ್ವಿರುದ್ಧ – ತಯಾರಿಸಲ್ಪಟ್ಟ ಪದಾರ್ಥಗಳಲ್ಲಿ ಸೂಕ್ತವಾದ ರೀತಿಯಲ್ಲಿ ರಸದ ಉತ್ಪತ್ತಿ ಆಗುವ ಮೊದಲು / ರಸದಲ್ಲಿ ವಿಕೃತಿ ಆದ ನಂತರ ಆ ಪದಾರ್ಥವನ್ನು ಸೇವಿಸುವುದು.

ಉದಾಃ – ಹಾಲು ಪೆಪ್ಪು ಹಾಕಿದ ನಂತರ ಅರ್ಧ ಹೆಪ್ಪಾಗಿರುವ ಮೊಸರು ಹಾಗೂ ಅತಿಯಾಗಿ ಹುಳಿಯಾಗಿರುವ ಮೊಸರು ಎರಡೂ ಕೂಡ ಸಂಪದ್ವಿರುದ್ಧ ಎಂದು ಪರಿಗಳಿಸಲ್ಪಡುತ್ತವೆ.

  1. ವಿಧಿವಿರುದ್ಧ – ಆಹಾರ ತಯಾರಿಕೆಯಲ್ಲಿ ಮತ್ತು ಬಳಕೆಯಲ್ಲಿ ಯಾವುದೇ ರೀತಿ – ನೀತಿಗಳಿಲ್ಲದೇ ಆಹಾರ ಸೇವಿಸುವುದು.

ಉದಾಃ – ರಸ್ತೆಬದಿಯ ಆಹಾರಪದಾರ್ಥಗಳನ್ನು ಗಮನಿಸಿದರೆ ಅವುಗಳ ದ್ರವ್ಯ ಸಂಯೋಜನೆಗಾಗಲೀ, ತಯಾರಿಕಾ ವಿಧಾನಕ್ಕಾಗಲೀ, ಬಳಕೆಯಲ್ಲಾಗಲೀ ಯಾವುದೇ ಸೂಕ್ತ ವಿಧಿ – ವಿಧಾನಗಳಿಲ್ಲದಿರುವುದು ಎಲ್ಲರ ಗಮನಕ್ಕೆ ಬರುವ ವಿಚಾರ. ಇದನ್ನು ಆಯುರ್ವೇದ ವಿಧಿವಿರುದ್ಧ ಎಂದು ಗುರುತಿಸುತ್ತದೆ.

ಹೀಗೆ ಅನೇಕ ರೀತಿಯಲ್ಲಿ ವಿರುದ್ಧವಾಗಿರಬಹುದಾದ ಪದಾರ್ಥಗಳನ್ನು ಸೇರಿಸಿ ಇನ್ನೇನನ್ನೋ ತಯಾರಿಸಿದಾಗ ಅದರೆ ರುಚಿ ಒಂದೊಮ್ಮೆ ಹಿತವಾಗಿದ್ದರೂ ಪರಿಣಾಮ ಮಾತ್ರ ಭೀಕರವಾಗಿರಬಹುದು. ಅನೇಕ ವಿಧವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು ಮಾತ್ರವಲ್ಲ; ಮೃತ್ಯುವಿಗೂ ಕಾರಣವಾಗಬಹುದು. ಹಾಗಾಗಿ ಪದಾರ್ಥಗಳ ಸಂಯೋಗದ ಕುರಿತು ಅತ್ಯಂತ ಎಚ್ಚರಿಕೆ ಅಗತ್ಯ.

 

  1. ಆಹಾರ ಪದಾರ್ಥಗಳ ತಯಾರಿಕಾ ವಿಧಾನ :

  • ಆಹಾರ ತಯಾರಿಕಾ ಸಂದರ್ಭದಲ್ಲಿ ಮೃದು / ಮಂದಾಗ್ನಿಯಲ್ಲಿ ಆಹಾರ ತಯಾರಿಕೆ ಉತ್ತಮ.
  • ಅಂತೆಯೇ ಆಹಾರ ತಯಾರಿಸುವವನ ಬಾಹ್ಯ ಶುಚಿತ್ವ, ಮನಃಸ್ಥಿತಿ ಇತ್ಯಾದಿಗಳು ಅತ್ಯಂತ ಪರಿಣಾಮಕಾರಿ.

 

  1. ಆಹಾರಪದಾರ್ಥಗಳ ಬಳಕೆಯ ವಿಧಾನ :

  • ಸಕಾಲದಲ್ಲಿ, ಸೂಕ್ತವಾದ ಕಾಲದಲ್ಲಿ ಆಹಾರ ಬಳಕೆ ಮಾಡತಕ್ಕದ್ದು. ದಿನದಲ್ಲಿ ಎರಡು / ಮೂರು ಬಾರಿಯ ಆಹಾರಸೇವನೆ ಅವರವರ ದೇಹಪ್ರಕೃತಿ, ವಯಸ್ಸು, ಜೀರ್ಣಶಕ್ತಿ, ಅವಶ್ಯಕತೆ ಇತ್ಯಾದಿಗಳನ್ನಾಧರಿಸಿ ಅನುಸರಿಸಬಹುದು. ಸಾಮಾನ್ಯವಾಗಿ ಆಯುರ್ವೇದ ಆಚಾರ್ಯರ ಮತದಂತೆ ಬೆಳಿಗ್ಗೆ ಸೂಯೋದಯವಾದ ನಂತರ ಎರಡನೆಯ ಯಾಮದ ಪ್ರಾರಂಭ (ಸುಮಾರಾಗಿ 00 ರಿಂದ 10.30 am)  ಮೊದಲ ಆಹಾರ ಕಾಲ. (ಭಾವಪ್ರಕಾಶ ನಿಘಂಟು) ಅಂತೆಯೇ ರಾತ್ರೆಯ ಆಹಾರ ಸೂರ್ಯಾಸ್ತದ ನಂತರದ ಮೊದಲ ಯಾಮದಲ್ಲಿ (ಸುಮಾರಾಗಿ 8 ಘಂಟೆಯೊಳಗೆ)
  • ತನಗೆ ಚಿಕ್ಕಂದಿನಿಂದಲೂ ಒಗ್ಗಿರುವ ಆಹಾರ ಎಂದಿಗೂ ಉತ್ತಮ. ಬೇರಾವುದೋ ದೇಶ- ಕಾಲಗಳಲ್ಲಿ ಬೆಳೆದ ಧಾನ್ಯಗಳು, ಸೊಪ್ಪು – ತರಕಾರಿಗಳ ಬಳಕೆ ಉತ್ತಮವಲ್ಲ. ಇಂದು ಗಮನಿಸುವಂತೆ ತಾನು ಚಿಕ್ಕಂದಿನಿಂದ ಬಳಸಿ ಒಗ್ಗಿರುವ ಅನ್ನವನ್ನು ಶುಗರ್ ತೊಂದರೆ ಬರುತ್ತದೆ ಎಂಬ ಭಯದಿಂದಲೋ, ಇನ್ಯಾವುದೋ ಧಾನ್ಯ (ಇತರ ಏಕದಳಧಾನ್ಯಗಳು / ಕಿರುಧಾನ್ಯಗಳು) ಒಳ್ಳೆಯದೆಂಬ ಮಾಹಿತಿಯಿಂದಲೋ ಸಂಪೂರ್ಣ ತ್ಯಜಿಸಿ ಮತ್ತೊಂದು ಧಾನ್ಯದ ಬಳಕೆಗೆ ಅಂಟಿಕೊಳ್ಳುವುದು.
  • ಸೇವಿಸುವ ಆಹಾರ ಸುಖೋಷ್ಣವಾಗಿರಬೇಕು. ಅತಿ ಉಷ್ಣ / ಅತಿ ಶೀತಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಪ್ರತಿಬಾರಿಯೂ ಹೊಸದಾಗಿ ತಯಾರಿಸಿದ ಆಹಾರಸೇವನೆ ಉತ್ತಮ. ಒಮ್ಮೆ ಆಹಾರವನ್ನು ಸಿದ್ಧಪಡಿಸಿ ಫ್ರಿಡ್ಜ್ ನಲ್ಲಿಟ್ಟು ಪುನಃಪುನಃ ಬಿಸಿಮಾಡಿ ಬಳಸುವುದು ಆರೋಗ್ಯಕರವಲ್ಲ.
  • ಅತಿವೇಗದ, ಅತಿನಿಧಾನವಾದ ಆಹಾರಸೇವನೆ ಒಳ್ಳೆಯದಲ್ಲ.
  • ಬಳಸುವ ಆಹಾರದಲ್ಲಿ ಮನಸ್ಸಿಟ್ಟು, ಸಮಾಧಾನವಾದ ಮನದಿಂದ ಸಾವಕಾಶವಾಗಿ ಆಹಾರ ಸೇವಿಸುವುದು ಉತ್ತಮ. ಅನ್ಯಮನಸ್ಕರಾಗಿ (ಟಿ ವಿ ಇತ್ಯಾದಿಗಳಲ್ಲಿ ತೊಡಗಿ) ಆಹಾರಸೇವನೆ ಕೂಡದು.
  • ಒಮ್ಮೆ ಸೇವಿಸಿದ ಆಹಾರ ಜೀರ್ಣಿಸಲ್ಪಡದೇ ಪುನಃಪುನಃ ಆಹಾರಸೇವನೆ ಕೂಡದು.
  • ದಿನದ ಬೆಳಗ್ಗಿನ ಆಹಾರ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿದ್ದರೂ ಚಿಂತೆಯಿಲ್ಲ. ರಾತ್ರೆಯ ಆಹಾರ ಜೀರ್ಣಕ್ಕೆ ಸಾಧ್ಯವಾದಷ್ಟು ಲಘುವಾಗಿರಲಿ.

ಆಹಾರಪದಾರ್ಥಗಳ ವಿಂಗಡಣೆ :

ಆಹಾರಪದಾರ್ಥಗಳನ್ನು ಪ್ರಧಾನವಾಗಿ ಮೂರು ಭಾಗವಾಗಿ ವಿಂಗಡಿಸುತ್ತಾರೆ.

  1. ಸ್ವಸ್ಥಹಿತ – ಎಂದರೆ ಒಬ್ಬ ಆರೋಗ್ಯವಂತನ ಆರೋಗ್ಯಕ್ಕೆ ಹಿತವಾದವು ; ಉದಾಃ – ಅಕ್ಕಿ, ಗೋಧಿ, ಯವ (ಬಾರ್ಲಿ), ಹೆಸರುಕಾಳು / ಬೇಳೆ, ಹಾಲು, ಮಜ್ಜಿಗೆ, ತುಪ್ಪ, ಬೆಣ್ಣೆ, ಜೇನು, ಪಡುವಲ, ಹೀರೆ, ಎಳೆಯಮೂಲಂಗಿ, ಹೊನಗೊನ್ನೆ, ಚಕ್ಕೋತಸೊಪ್ಪು, ಕೊಮ್ಮೆಸೊಪ್ಪು ಇತ್ಯಾದಿಗಳು.
  2. ಶಮನ – ಎಂದರೆ ಏರುಪೇರಾಗಿರುವ ಆರೋಗ್ಯವನ್ನು ಸಮಸ್ಥಿತಿಗೆ ತರುವಂತಹವು ; ಉದಾಃ – ವಾಯುವಿಕೃತಿ ಉಂಟಾದಾಗ ಜೀರಿಗೆ ಕಷಾಯ, ಪಿತ್ತವಿಕೃತಿಯಲ್ಲಿ ಧನಿಯಾ, ಲಾವಂಚ, ಶ್ರೀಗಂಧ, ಸೊಗದೇಬೇರು, ಕಫವಿಕೃತಿಯಲ್ಲಿ ಶುಂಠಿ, ತುಳಸಿ, ವೀಳ್ಯದೆಲೆ, ಜೇನು ಇತ್ಯಾದಿಗಳ ಬಳಕೆ.
  3. ಕೋಪನ – ಎಂದರೆ ಕೆಲವು ಪದಾರ್ಥಗಳನ್ನು ಬಳಸಿದಾಗ ಸಮಸ್ಥಿತಿಯಲ್ಲಿರುವ ದೋಷಗಳು ಕೆರಳುವುವು. ಉದಾಃ – ಬಟಾಣಿಯ ಬಳಕೆಯಿಂದ ವಾಯು ಕೆರಳುವುದು, ಟೊಮಾಟೋ, ಬೆಳ್ಳುಳ್ಳಿಯ ಬಳಕೆಯಿಂದ ಪಿತ್ತ ಕೆರಳುವುದು ಇತ್ಯಾದಿ.

ಈ ಎಲ್ಲ ವಿಷಯಗಳನ್ನು ಮನದಲ್ಲಿಟ್ಟುಕೊಂಡು ಆಹಾರಪದಾರ್ಥಗಳನ್ನು ಬಳಸಬೇಕಾಗುತ್ತದೆ.

ಇದೇ ರೀತಿ ಕೆಲವು ಪದಾರ್ಥಗಳ ಬಳಕೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಉದಾಃ –ಇಂದು ನಾವು ಗಮನಿಸುವಂತೆ ತರಕಾರಿ, ಸೊಪ್ಪುಗಳ ಅತಿಯಾದ ಬಳಕೆ, ಒಣಗಿದ / ಬಾಡಿದ ಸೊಪ್ಪು – ತರಕಾರಿಗಳ ಬಳಕೆ, ಕಿರುಧಾನ್ಯಗಳನ್ನು ಅತಿಪ್ರಮಾಣದಲ್ಲಿ ನಿತ್ಯ ಬಳಸುವುದು, ಮೊಳಕೆಕಾಳುಗಳು, ಉದ್ದು, ಮೊಸರು ಇವುಗಳ ನಿತ್ಯ ಹಾಗೂ ಅತಿಪ್ರಮಾಣದ ಬಳಕೆ ; ಅತಿ ಉಪ್ಪಿನಿಂದ ಕೂಡಿರುವ ಆಹಾರ, ಹಾಲು – ಮಜ್ಜಿಗೆಗಳ ಮಿಶ್ರಣ, ಒಡೆದ ಹಾಲಿನಿಂದ ಮಾಡಿದ ಪದಾರ್ಥಗಳು (ಪನ್ನೀರ್ ಇತ್ಯಾದಿಗಳು) ಇವುಗಳನ್ನು ಬಳಕೆಮಾಡಬಾರದು ಎಂದು ಆಯುರ್ವೇದ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸುತ್ತದೆ.

ಹೀಗೆ ತಮ್ಮ ಯಾವುದೇ ಸ್ವಾರ್ಥವಿಲ್ಲದೇ ವಿಶ್ವದ ಎಲ್ಲ ಜನರ ಆರೋಗ್ಯರಕ್ಷಣೆಗಾಗಿ ಆಹಾರದ ವಿಚಾರದಲ್ಲಿ ಆಯುರ್ವೇದ ಆಚಾರ್ಯರು ನೀಡುವ ವಿವರಣೆಗಳನ್ನು ಸಮಾಧಾನವಾದ ಮನಸ್ಸಿನಿಂದ ಅಧ್ಯಯನ ಮಾಡಿ, ಅರ್ಥೈಸಿಕೊಂಡು, ಗೋಜಲು ಮಾಡದೇ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವವನಿಗೆ ಭೌತಿಕ, ದೈವಿಕ, ಆಧ್ಯಾತ್ಮಿಕ ಮೂರೂ ಸ್ತರಗಳಲ್ಲಿಯೂ ಆರೋಗ್ಯ ಸಹಜವಾಗಿಯೇ ಲಭಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹ ಮನಸ್ಸು – ಬುದ್ಧಿಗಳನ್ನು ದೇವಧನ್ವಂತರಿಯು ನಮಗೆಲ್ಲ ಕರುಣಿಸಲಿ ಎಂಬುದಷ್ಟೇ ಪ್ರಾರ್ಥನೆ.

 

|| ಶ್ರೀಸದ್ಗುರುಚರಣಾರವಿಂದಾರ್ಪಣಮಸ್ತು ||