ದಿನಚರ್ಯಾ ಮತ್ತು ಮಾನಸಿಕ ಸ್ವಾಸ್ಥ್ಯ

– ಡಾ. ಪ್ರಸನ್ನ ವೆಂಕಟೇಶ್

ಪ್ರತಿಯೊಂದು ಜೀವಿಯೂ ಸುಖವನ್ನು ಹೊಂದಲೆಂದೇ ಸದಾ ಪ್ರಯತ್ನಶೀಲವಾಗಿರುತ್ತವೆ. ಇಂದು ಸಾಮಾನ್ಯವಾಗಿ ನಾವು ಗಮನಿಸುವಂತೆ ಬಹುಪಾಲು ಮಾನವರು ಆ ಸುಖವನ್ನು ಬಾಹ್ಯಪ್ರಪಂಚದಲ್ಲಿ ವಸ್ತುಗಳಲ್ಲಿ, ವಿಷಯಗಳಲ್ಲಿ ಹುಡುಕುವುದನ್ನು ಕಾಣುತ್ತೇವೆ. ವಾಹನ, ಮನೆ / ಬಂಗಲೆ ಇತ್ಯಾದಿ ಆಸ್ತಿ, ಅಂತಸ್ತು, ಇನ್ನಿತರ ವಸ್ತುಗಳಲ್ಲಿ ಆ ಸುಖವನ್ನು ಹುಡುಕುವುದರಲ್ಲಿ ನಿರತರಾಗಿರುವುದನ್ನೂ ಗಮನಿಸುತ್ತೇವೆ.

ಆದರೆ ನಮ್ಮ ಭಾರತೀಯ ಪರಂಪರೆಯಲ್ಲಿ ಗಮನಿಸುವಂತೆ ನಮ್ಮ ಹಿರಿಯರು ಈ ಸುಖವನ್ನು ಬಾಹ್ಯ ವಸ್ತುಗಳಲ್ಲಿ ಮಾತ್ರವಲ್ಲದೇ ಆಂತರಿಕವಾಗಿಯೂ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಬಾಹ್ಯಪ್ರಪಂಚದ ವಸ್ತು, ವಿಷಯಗಳಲ್ಲಿ ಸುಖವನ್ನು ಕಂಡುದರ ಜೊತೆಗೆ ಇಂದ್ರಿಯಗಳ ದ್ವಾರಾ ಹೊರಮುಖವಾಗಿ ಹರಿವ ಮನಸ್ಸನ್ನು ನಿಗ್ರಹಿಸಿ, ಒಳ:ಮುಖವಾಗಿ ತಿರುಗಿಸಿದಾಗ, ಭಗವತ್ಸಾಕ್ಷಾತ್ಕಾರ ಆದಾಗ ಲಭಿಸುವ ಸುಖ ಅತ್ಯಂತ ಉನ್ನತ, ಉತ್ಕೃಷ್ಟವಾದದ್ದು. ಉಳಿದೆಲ್ಲ ಈ ಲೌಕಿಕ ಸುಖಗಳೂ ಅದರ ಮುಂದೆ ತೃಣಸಮಾನ ಎಂದೂ ಸಾರಿದರು.

ಆ ಸುಖ ಯಾವುದರಲ್ಲಿ, ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದರೆ –

ಸುಖಂ ಚ ನ ವಿನಾ ಧರ್ಮಾತ್, ತಸ್ಮಾತ್ ಧರ್ಮಪರೋ ಭವೇತ್  || ಅ. ಹೃ, ಸೂ, 1 /   ||

ಅಂದರೆ ಧರ್ಮದ ಹೊರತಾಗಿ ಸುಖವಿಲ್ಲ; ಹಾಗಾಗಿ ಆ ಸುಖಕ್ಕಾಗಿ ಧರ್ಮಪರನಾಗು ಎಂದು.

ಸ್ವಲ್ಪ ಆಳಕ್ಕಿಳಿದು ಏನು, ಹೇಗೆ ಎಂದು ಗಮನಿಸುವುದಾದರೆ

  • ಆದಿಭೌತಿಕ ಸ್ತರದಲ್ಲಿ ವಾತ – ಪಿತ್ತ – ಕಫ ಎಂಬ ತ್ರಿದೋಷಗಳ ಮುಖಾಂತರ ಶರೀರಧರ್ಮ, ಇಂದ್ರಿಯಧರ್ಮ ಕಾಪಾಡಿಕೊಳ್ಳಬೇಕು;
  • ಆದಿದೈವಿಕ ವಿಷಯಕವಾಗಿ ಸತ್ವ – ರಜಸ್ಸು – ತಮಸ್ಸುಗಳೆಂಬ ತ್ರಿಗುಣಗಳ ಮುಖಾಂತರ ಮನೋಧರ್ಮ,
  • ಆಧ್ಯಾತ್ಮಿಕ ವಿಷಯಕವಾಗಿ ಆತ್ಮಧರ್ಮ

ಹೀಗೆ ಮೂರು ಸ್ತರಗಳಲ್ಲೂ ಧರ್ಮಪರನಾಗಿದ್ದು ಆಯಾ ಧರ್ಮಗಳನ್ನು ರಕ್ಷಿಸಿಕೊಳ್ಳಬೇಕು – ಎನ್ನುತ್ತದೆ.

ಈ ರೀತಿ ಮೂರೂ ಕ್ಷೇತ್ರಗಳ ಧರ್ಮವನ್ನು ಕಾಪಾಡಿಕೊಂಡಾಗ ಏನು ಲಾಭ ಎಂದರೆ – ಸ್ವಾಸ್ಥ್ಯವೇ ಲಾಭ ಎನ್ನುತ್ತದೆ ಆಯುರ್ವೇದ. ಸ್ವಸ್ಥ ಪದಕ್ಕೆ ಇಂದು WHO ಸೇರಿದಂತೆ ವಿವಿಧ ದೇಶಗಳ ಆರೋಗ್ಯಶಾಸ್ತ್ರಗಳು ನೀಡುವ ಅನೇಕ ವಿಧವಾದ ಉತ್ತರಗಳನ್ನು ಸಮಾಜದಲ್ಲಿ ಪಡೆಯುತ್ತೇವೆ. ಆದರೆ ನಮ್ಮ ದೇಶೀಯ ಶಾಸ್ತ್ರವಾದ ಆಯುರ್ವೇದ ಕೊಡುವ ನೋಟ ಅವುಗಳಲ್ಲೆಲ್ಲ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಆಯುರ್ವೇದ ವಿವರಿಸುವಂತೆ

ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ         |

ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ       ||         (ಸು. ಸೂ 15)

ಎಂದರೆ ದೋಷಗಳಲ್ಲಿ, ಅಗ್ನಿಗಳಲ್ಲಿ, ಧಾತು – ಮಲಗಳಲ್ಲಿ ಸಾಮ್ಯಾವಸ್ಥೆಯಿರುವಾಗ, ಅಂತೆಯೇ ಆತ್ಮಾ, ಇಂದ್ರಿಯ, ಮನಸ್ಸುಗಳಲ್ಲಿ ಪ್ರಸನ್ನತೆಯಿದ್ದಾಗ ಮಾತ್ರ ಅಂತಹವನನ್ನು ಸ್ವಸ್ಥ ಎಂದು ಕರೆಯುತ್ತಿದ್ದಾರೆ. ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ವಿವರಿಸಿದಂತೆ ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಕೇವಲ ಜ್ಞಾನಿಯನ್ನು ಮಾತ್ರ ಈ ರೀತಿ ಸ್ವಸ್ಥ ಎಂದು ಕರೆಯಬಹುದಾಗಿದೆ.

ಇಲ್ಲಿ ನಾವು ಗಮನಿಸುವ ಬಹು ಪ್ರಮುಖವಾದ ಅಂಶವೆಂದರೆ ಇಡಿಯ ವಿಶ್ವದ ಬಹುಪಾಲು ಆರೋಗ್ಯಶಾಸ್ತ್ರಗಳು ಕೇವಲ ಶಾರೀರಿಕ ಸಮಸ್ಥಿತಿಯೇ ಸ್ವಸ್ಥನ ಲಕ್ಷಣ ಎನ್ನುತ್ತಿರುವಾಗಲೇ, ಅದರ ಹಿಂದೆ ಮನಸ್ಸು, ಆತ್ಮಾ ಇವುಗಳ ನೋಟವನ್ನು, ಅರಿವನ್ನು ಲೋಕಕ್ಕೆ ನೀಡಿದವರು ನಮ್ಮ ಭಾರತೀಯರು.

ಇಲ್ಲಿ ಮಾನಸಿಕ ಸ್ವಾಸ್ಥ್ಯ ಎಂದರೆ ಏನು, ಹೇಗೆ ಸಿದ್ಧಿಸುತ್ತೆ ಎಂದು ಗಮನಿಸಿದರೆ ಭಾರತೀಯರ ಉತ್ತರ – ಈ ಸೃಷ್ಟಿಸಹಜ ಗುಣಗಳಾದ ಸತ್ವ, ರಜಸ್ಸು ಮತ್ತು ತಮಸ್ಸು ಇವುಗಳ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳುವುದು ಎಂಬುದಾಗಿ ಭಾವಿಸಬಹುದಾಗಿದೆ.

ಇವುಗಳಿಗೂ, ನಮ್ಮ ದಿನಚರ್ಯೆಗೂ ಏನು ಸಂಬಂಧ ಎಂದರೆ – ನಮ್ಮ ಶರೀರಕ್ಕೂ, ಮನಸ್ಸಿಗೂ ಇರುವ ಸಂಬಂಧ ಗಮನಿಸಿದರೆ ಯಾರಿಗಾದರೂ ತಿಳಿಯುತ್ತೆ; ಶರೀರಕ್ಕೆ ನೋವಾದರೆ ಮನಸ್ಸು ಸ್ಪಂದಿಸುತ್ತೆ ಅಂತೆಯೇ ಮನಸ್ಸಿಗೆ ನೋವಾದರೆ ಶರೀರ ಸ್ಪಂದಿಸುತ್ತೆ. ಅಂತೆಯೇ ನಮ್ಮ ಹಗಲು – ರಾತ್ರಿಗಳಿಗೆ ಸಂಬಂಧಿಸಿದಂತೆ ನಾವು ಏಳುವ ಸಮಯ, ರೀತಿಯಿಂದ ಪ್ರಾರಂಭಿಸಿ ರಾತ್ರಿಕಾಲದಲ್ಲಿ ನಮ್ಮ ವಿಧಿ-ವಿಧಾನಗಳು ಇತ್ಯಾದಿ ಎಲ್ಲವೂ ತ್ರಿಗುಣಗಳ ಮೇಲೆ ಅರ್ಥಾತ್ ನಮ್ಮ ಮನಸ್ಸಿನ ಮೇಲೆ ತಮ್ಮ ಪರಿಣಾಮವನ್ನು ಬೀರುತ್ತವೆ.

ಸ್ವಲ್ಪ ವಿವರವಾಗಿ ನೋಡುವುದಾದರೆ

  1. ಏಳಬೇಕಾದ ಸಮಯ

ಪ್ರತಿನಿತ್ಯ ಬೆಳಿಗ್ಗೆ ನಾವು ಏಳಬೇಕಾದ ಸಮಯದ ಕುರಿತಾಗಿ ಭಾರತೀಯ ಋಷಿಗಳ ನೋಟ – ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು ಎಂದು. ಆ ಮಹೂರ್ತದ ವೈಶಿಷ್ಟ್ಯವೇ ಸತ್ವಪ್ರಧಾನವಾಗಿದ್ದು, ನಮ್ಮ ಮನಸ್ಸನ್ನು ಭಗವಂತನೆಡೆಗೆ ಹರಿಸುವ ಧ್ಯಾನಾದಿ ಕಾರ್ಯಗಳಿಗೆ ಅತ್ಯಂತ ಪೋಷಕ. ಭೌತಿಕವಾಗಿಯೂ ಜ್ಞಾನಾರ್ಜನೆಗೆ ಉತ್ತಮವೇ. ಅದೇ ಒಂದೊಮ್ಮೆ ಆ ಸಮಯದಲ್ಲಿ ತಮಃ ಪ್ರಧಾನವಾದ ನಿದ್ರಾದಿಗಳಲ್ಲಿ ಆ ಸಮಯವನ್ನು ತೊಡಗಿಸಿಕೊಂಡರೆ ಕ್ರಮೇಣ ಮನಸ್ಸಿನಲ್ಲಿ ಆ ಗುಣಗಳೇ ಆಕ್ರಮಿಸುತ್ತಾ, ಆಗಬೇಕಾದ ದೊಡ್ಡ ಲಾಭ ನಷ್ಟವಾಗುತ್ತದೆ.

  1. ಏಳುವ ಮುನ್ನ

ಏಳುವ ಮುನ್ನ ಅಲ್ಪಕಾಲ ಬಲಮಗ್ಗುಲಾಗಿ ಮಲಗಿದ್ದು ನಂತರ ಏಳುವುದರಿಂದ ನಮ್ಮ ಉಸಿರಾಟದಲ್ಲಿ ಆಗುವ ಬದಲಾವಣೆಗಳು ನಮ್ಮ ಮನಸ್ಸಿನ ಮೇಲೆ, ತ್ರಿಗುಣಗಳ ಮೇಲೆ ಆಗುವ ಬದಲಾವಣೆಗಳು ದಿನಪೂರ್ತಿಯ ನಮ್ಮ ದೈಹಿಕ-ಮಾನಸಿಕ ವ್ಯವಹಾರಗಳ ಮೇಲೆ ಅಪರಿಮಿತವಾದ ಪರಿಣಾಮವನ್ನು ಉಂಟುಮಾಡುತ್ತವೆ.

  1. ದೇವನಮಸ್ಕಾರ

ದೇವನಮಸ್ಕಾರ, ಹಿರಿಯರಿಗೆ ನಮಸ್ಕಾರ – ಇವುಗಳಲ್ಲಿ ದೇವ / ದೇವತೆಗಳ , ಹಿರಿಯರ ಪ್ರಸನ್ನತೆಯಿಂದ ನಮ್ಮಲ್ಲಿ ಆಭ್ಯಂತರವಾಗಿ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರಿಯಬಹುದಾಗಿದೆ.

  1. ಶೌಚ

ಇಲ್ಲಿ ಶರೀರದ ಸ್ಥೂಲಮಲವನ್ನು ವಿಸರ್ಜಿಸುವ ಕುರಿತಾಗಿ ವಿವರಣೆಯಿದೆ. ಭೌತಿಕವಾಗಿ ನೋಡುವುದಾದರೆ, ಮಲಪ್ರವೃತ್ತಿ ಸಮರ್ಪಕವಾಗಿ ಆದಾಗ ಶರೀರದಲ್ಲಾಗುವ ಲಾಭಗಳು, ಮನಸ್ಸು ಹಗುರಾಗುವ ವಿಷಯಗಳನ್ನು ನಾವು ಪ್ರತಿಯೊಬ್ಬರೂ ಹಲವಾರು ಸಂದರ್ಭಗಳಲ್ಲಿ ಗಮನಿಸಿರುತ್ತೇವೆ. ಅಂತೆಯೇ ಅಪರಿಪೂರ್ಣವಾದರೆ ಮಲಸಂಗ, ಅದರಿಂದಾಗಿ ವಾತದುಷ್ಟಿ, ವಾತದ ಮೇಲ್ಮುಖಗತಿ (ಉದಾವರ್ತ) – ಅದರಿಂದಾಗಿ ಕ್ರಮೇಣ ಮನೋವಿಕಾರ ಈ ವಿವರಣೆಗಳನ್ನು ಆಯುರ್ವೇದ ಗ್ರಂಥಗಳಲ್ಲಿ ಗಮನಿಸುತ್ತೇವೆ. ಅದೇರೀತಿ ಮನೆಯೊಳಗೆ, ಕೊಠಡಿಯೊಳಗೆ ಶೌಚಾಲಯ ಇದ್ದರೆ ಆಗುವ ಪರಿಣಾಮಗಳ ಕುರಿತು, ಅದೇ ರೀತಿ ಹಗಲು – ರಾತ್ರಿಗಳಿಗೆ ಸಂಬಂಧಿಸಿದಂತೆ, ಯಾವ ದಿಕ್ಕಿಗೆ ಅಭಿಮುಖವಾಗಿ ಮಲವಿಸರ್ಜನೆಯ ಪರಿಣಾಮಗಳ ಕುರಿತು ವಾಸ್ತುಶಾಸ್ತ್ರ ಹೇಳುತ್ತದೆ. ಮಲವಿಸರ್ಜನೆಯ ನಂತರ ಗುದ, ಹಸ್ತಗಳ ಶುದ್ದಿ ಪ್ರಕ್ರಿಯೆ – ಆಯುರ್ವೇದದ ನೋಟ; ಮೃತ್ತಿಕಾ ಸ್ಪರ್ಶ ಪರಿಣಾಮ, ಮನಸ್ಸಿನ ಮೇಲೆ ಅದರ ಪರಿಣಾಮಗಳು ಆಧ್ಯಾತ್ಮಿಕವಾಗಿ ನಮ್ಮ ಅರಿವಿಗೆ ಬರುತ್ತವೆ.

  1. ಅಂಜನ

ಕಣ್ಣಿಗೆ ಔಷಧಯುಕ್ತ ಕಾಡಿಗೆಯನ್ನು ಹಚ್ಚುವ ಈ ಕ್ರಿಯೆಯಲ್ಲಿ ಕಣ್ಣಿನ ಆರೋಗ್ಯಕ್ಕೆ ಸಮಸ್ಯೆಯನ್ನುಂಟುಮಾಡಬಹುದಾದ ಕಫನಿವಾರಣೆಯಾಗುವುದರ ಜೊತೆಗೆ ಮನಸ್ಸಿನ ತಮೋ ಆವರಣ ನಿವಾರಣೆಯಾಗುತ್ತದೆ. ಚಿಕಿತ್ಸಾ ವಿಷಯಕವಾಗಿ ವಿವರಿಸುವಾಗ ಚರಕಮಹರ್ಷಿಗಳು ಈ ಕ್ರಿಯೆಯ ಮಹತ್ವವನ್ನು ವಿವರಿಸುತ್ತಾರೆ.

  1. ನಸ್ಯ

“ನಾಸಾ ಹಿ ಶಿರಸೋ ದ್ವಾರಮ್ ” ಎನ್ನುತ್ತದೆ ಆಯುರ್ವೇದ. ಶಿರಸ್ಸಿನ ದ್ವಾರವಾದ ಮೂಗಿನ ಮುಖಾಂತರ ಪ್ರಯೋಗಿಸುವ ಔಷಧಗಳಿಂದ ಶಿರಸ್ಸಿನ ಸ್ಥಾನದಲ್ಲಿ ಪ್ರಧಾನವಾಗಿ ಕಫ ಮತ್ತು ಇತರ ದೋಷಗಳು ಸಂಚಿತವಾಗಿ ಉಂಟಾಗುವ ಜಾಡ್ಯವೇ ಮೊದಲಾದ ಶಾರೀರಿಕ ದೋಷಗಳನ್ನೂ, ತನ್ಮೂಲಕ ತಮಸ್ಸು ಮುಂತಾದ ಗುಣಗಳನ್ನು ನಿಯಂತ್ರಿಸಬಹುದಾಗಿದೆ.

  1. ಗಂಡೂಷ

ಬಾಯಿಯಲ್ಲಿ ತೈಲ / ತುಪ್ಪ / ಕಷಾಯ ಇತ್ಯಾದಿ ದ್ರವಗಳನ್ನಿಟ್ಟು ಸುಮಾರು 10-20 ನಿಮಿಷಗಳ ಕಾಲ ಮುಕ್ಕಳಿಸುವ ಈ ಪ್ರಕ್ರಿಯೆಯಿಂದ ಶರೀರದ ಮೇಲ್ಭಾಗದಲ್ಲಿ (ಉತ್ತಮಾಂಗದಲ್ಲಿ) ರುವ ಕಫಪ್ರಧಾನವಾದ ದೋಷಗಳು ಕರಗಿ (ಉತ್ಕ್ಲೇಶ) ಹೊರಬರಲು ಅನುಕೂಲವಾಗುತ್ತದೆ. ತನ್ಮೂಲಕ ತಮಸ್ಸು ಮತ್ತು ರಜಸ್ಸುಗಳ ಏರಿಳಿತವನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ.

  1. ಧೂಮ

ಅರಶಿನ, ಬಜೆ ಮುಂತಾದ ಔಷಧಯುಕ್ತ ಗಿಡಮೂಲಿಕೆಗಳಿಂದ ಬರುವ ಹೊಗೆಯನ್ನು (ಧೂಮ) ಆಘ್ರಾಣಿಸುವ ಮುಖಾಂತರ ಮೇಲಿನ ಕ್ರಿಯೆಗಳಾದನಂತರವೂ ಉತ್ತಮಾಂಗದಲ್ಲಿ ಉಳಿದಿರುವ ಶೇಷ ಕಫವನ್ನು, ತನ್ಮೂಲಕ ತಮಸ್ಸನ್ನು ನಿಗ್ರಹಿಸಬಹುದು.

  1. ತಾಂಬೂಲ

ವೀಳ್ಯದೆಲೆ, ಅಡಿಕೆ, ಸುಣ್ಣ, ಕೊಬ್ಬರಿ, ಲವಂಗ ಮುಂತಾದ ಪದಾರ್ಥಗಳ ವಿಶಿಷ್ಟ ಮಿಶ್ರಣವಾದ ಇದರ ಬಳಕೆಯಿಂದ ಜಾಠರಾಗ್ನಿಯು ಅತಿಶಯವಾಗಿ ವೃದ್ಧಿಯಾಗುವುದರ ಜೊತೆಗೆ ಕಫ – ವಾತಗಳಲ್ಲಿ ಸಾಮ್ಯತೆ ಏರ್ಪಡುತ್ತದೆ. ಮನಸ್ಸಿನ ನೇರದಲ್ಲೂ ಗಮನಿಸುವುದಾದರೆ ತಮೋ ಆವರಣ ತೆಗೆಯುವಲ್ಲಿ ಸಹಕಾರಿ. ಆದರೆ ಸ್ವಲ್ಪಮಟ್ಟಿಗೆ ರಜಸ್ಸನ್ನು, ಕಾಮಾಸಕ್ತಿಯನ್ನು ವೃದ್ಧಿಸುತ್ತಾದ್ದರಿಂದ ಬ್ರಹ್ಮಚರ್ಯಾಶ್ರಮದಲ್ಲಿರುವವರು ಇದನ್ನು ಬಳಸಕೂಡದು ಎಂಬ ನಿಷೇಧ ಇದೆ.

  1. ಅಭ್ಯಂಗ

ಮನಸ್ಸನ್ನು ಸದಾ ಚಂಚಲಗೊಳಿಸುವ ವಾತದ ಸ್ಥಾನಗಳಲ್ಲಿ ಚರ್ಮವೂ ಒಂದು. ಅಂತಹ ಚರ್ಮದ ಮೇಲೆ ಶುದ್ಧ ಎಳ್ಳೆಣ್ಣೆಯನ್ನಾಗಲೀ / ಸಂಸ್ಕಾರಿತ ತೈಲಗಳನ್ನಾಗಲೀ ಹಚ್ಚುವ ಪ್ರಕ್ರಿಯೆ. ಈ ಮುಖಾಂತರ ಶಾರೀರಿಕವಾಗಿ ಕುಪಿತವಾಗಿರುವ ವಾತವನ್ನು ಹತೋಟಿಗೆ ತರಬಹುದಲ್ಲದೆ ಸಮಸ್ಥಿತಿಯಲ್ಲಿರುವ ಪಿತ್ತ-ಕಫಗಳಲ್ಲಿ ಸಾಮ್ಯತೆಯನ್ನು ಕಾಪಾಡಬಹುದಾಗಿದೆ. ಮನಸ್ಸಿನ ನೇರದಲ್ಲೂ (ಚಂಚಲತೆಯನ್ನು) ರಜಸ್ಸನ್ನು ಹತೋಟಿಯಲ್ಲಿಡಲು, ಉತ್ತಮವಾದ ನಿದ್ರೆಗೆ ಅನುಕೂಲಕಾರಿಯಾದ್ದರಿಂದ ಮನಸ್ಸಿನ ಅನೇಕಾನೇಕ ಭಾವನೆಗಳ ಏರಿಳಿತವನ್ನು ನಿಯಂತ್ರಿಸಲು ಅತ್ಯಂತ ಸಹಕಾರಿ.

  1. ವ್ಯಾಯಾಮ

ಶರೀರಕ್ಕೆ ಆಯಾಸವನ್ನುಂಟುಮಾಡುವ ಕ್ರಿಯೆಯನ್ನು ವ್ಯಾಯಾಮ ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಇಂದು gym, aerobics ಮುಂತಾದ ಅನೇಕಾನೇಕ ವ್ಯಾಯಾಮ ಪದ್ಧತಿಗಳಿರುವಾಗ ಭಾರತೀಯರ ವೈಶಿಷ್ಟ್ಯ ಗಮನಿಸುವುದಾದರೆ “ ಯೋಗಾಸನ “ ವನ್ನು ಪರಿಗಣಿಸಬಹುದಾಗಿದೆ. ಕ್ರಮಬದ್ಧವಾದ ಶಾರೀರಿಕ ಚಲನೆಗಳು, ಭಂಗಿಗಳು – ಈ ಮುಖಾಂತರ ಶಾರೀರಿಕ ಆರೋಗ್ಯ ಸಿದ್ದಿಸುವುದು ಮಾತ್ರವಲ್ಲದೇ ವ್ಯವಸ್ಥಿತವಾದ, ಪರಿಪೂರ್ಣವಾದ ಉಸಿರಾಟದ ಕ್ರಮಗಳಿಂದಾಗಿ ಮನೋನಿಗ್ರಹ, ತ್ರಿಗುಣಗಳ ಸಮಸ್ಥಿತಿಯೂ ಜೊತೆಯಲ್ಲೇ ಏರ್ಪಡುವುದನ್ನೂ ಗಮನಿಸುತ್ತೇವೆ.

  1. ಸ್ನಾನ

ಶರೀರದ ಹೊರಗಿನ ಕೊಳೆಯನ್ನು ಕಳೆಯುವ ಈ ಸ್ನಾನವು ಜೊತೆಯಲ್ಲೇ ಆಭ್ಯಂತರವಾಗಿ ಮನಸ್ಸಿನ ಒಳಗಿನ ಒತ್ತಡವನ್ನು / ಬೇಗುದಿಯನ್ನು ಕಡಿಮೆಮಾಡುವುದನ್ನು ನಾವೆಲ್ಲ ಗಮನಿಸುತ್ತೇವೆ. ತಮ್ಮ ಒಳನೋಟದಿಂದ ಕಂಡು ಭಾರತೀಯ ಋಷಿಗಳು ವಿವರಿಸಿರುವಂತೆ ಅನೇಕಾನೇಕ ಪಾಪಗಳನ್ನು ನಿವಾರಿಸಬಲ್ಲ ಗಂಗಾ, ಯಮುನಾ … ಕಾವೇರಿ ಮುಂತಾದ ತೀರ್ಥಗಳನ್ನು ಭಾವಿಸಿ ಬಳಸುವ ಯೋಗ್ಯವಾದ ನೀರು ಮನಸ್ಸಿನ ರಜಸ್ಸು – ತಮಸ್ಸುಗಳನ್ನೆಲ್ಲ ಕಳೆಯಬಲ್ಲುದು !!!

  1. ಆಹಾರದ ವಿಧಿ- ವಿಧಾನಗಳು

ಆಹಾರಸೇವನೆಯ ಕಾಲ

ಇಂದು ನಾವು ಸಮಾಜದಲ್ಲಿ ಗಮನಿಸುವಂತೆ ಯಾವುದೇ ಕಾಲದ ಚೌಕಟ್ಟಿಗೆ ಒಳಪಡದೇ ತನ್ನಿಷ್ಟದಂತೆ ಆಹಾರ ಸೇವಿಸುವ ಪ್ರವೃತ್ತಿಯನ್ನು ಹೆಚ್ಚಿನ ಜನರಲ್ಲಿ ಗಮನಿಸುತ್ತೇವೆ ಆದರೆ ಆಯುರ್ವೇದ ಹೇಳುವಂತೆ ಹಸಿವೆ ಪ್ರಾರಂಭವಾಗಿದ್ದು, ದೇಹವು ಲಘುವಾಗಿದ್ದು, ಉದ್ಗಾರಶುದ್ಧಿ ಇದ್ದಾಗ, ಮಲಮೂತ್ರಾದಿ ಯಾವುದೇ ವೇಗಗಳಿಲ್ಲದಿರುವಾಗ ಅಂತಹ ಕಾಲ ಆಹಾರಸೇವನೆಗೆ ಸೂಕ್ತ. ಇತ್ಯಾದಿ ಅನೇಕ ಮಾರ್ಗದರ್ಶಕವಾಕ್ಯಗಳು ಇಲ್ಲಿ ದೊರೆಯುತ್ತವೆ.

ಸೇವಿಸಿದ ಆಹಾರವು ಸರಿಯಾಗಿ ಜೀರ್ಣಿಸಲ್ಪಟ್ಟು ಧಾತುಗತವಾದಾಗ ಮಾತ್ರ ಆರೋಗ್ಯ ಸಿದ್ಧಿಸುತ್ತೆ ಎನ್ನುವುದು ಆಯುರ್ವೇದದ ನೋಟ. ಈ ಕಾರ್ಯವನ್ನು ಮಾಡುವ ಅಗ್ನಿಯನ್ನೇ ಪ್ರಧಾನವಾಗಿಟ್ಟುಕೊಂಡು ಆಯುರ್ವೇದ ಎಲ್ಲ ವಿವರಣೆಗಳನ್ನೂ ನೀಡುತ್ತದೆ.

ಆಹಾರಸೇವನೆಯ ವಿಧಿ

ಸಕಾಲದಲ್ಲಿ, ತನಗೆ ಒಗ್ಗಿರುವ, ಹಿತವಾಗಿರುವ ಸುಖೋಷ್ಣವಾದ, ಸ್ವಲ್ಪ ಜಿಡ್ಡಿನಿಂದ ಕೂಡಿರುವ, ಆರು ರಸಗಳನ್ನು ಸೇರಿಸಿ ತಯಾರಿಸಿದ ಆಹಾರ ಪದಾರ್ಥಗಳನ್ನು ಅವುಗಳಲ್ಲಿ ಮನಸ್ಸಿಟ್ಟು ಸೇವಿಸತಕ್ಕದ್ದು. ಸೇವಿಸುವ ಅನ್ನವನ್ನು ನಿಂದಿಸಬಾರದು

ಕೊಳಕಾದ ಪ್ರದೇಶ ಆಹಾರಸೇವನೆಗೆ ವರ್ಜ್ಯ. ಸ್ನಾನಮಾಡಿ / ಕೈ-ಕಾಲು-ಮುಖ ತೊಳೆದು ಶುಚಿಯಾದನಂತರ ಆಹಾರಸೇವನೆ ಯೋಗ್ಯ.

ಪಿತೃಗಳು, ದೇವತೆಗಳು, ಅತಿಥಿಗಳು, ಗುರುಗಳು, ಮಕ್ಕಳು ಇತ್ಯಾದಿಗಳಿಗೆ ಆಹಾರದಿಂದ ತೃಪ್ತಿಪಡಿಸಿ ನಂತರ ತಾನು ಆಹಾರ ಸ್ವೀಕರಿಸಬೇಕು.

ಸೇವನೆ ಅತಿವೇಗ ಅಥವಾ ಅತಿ ನಿಧಾನ ಕೂಡದು ; ಇನ್ನೂ ಮುಂತಾಗಿ ಸುದೀರ್ಘವಾಗಿ ವಿವರಿಸಿದ್ದಾರೆ.

ಸದಾಪಥ್ಯ

ಯಾವುದರ ನಿತ್ಯದ ಬಳಕೆಯಿಂದ ಶರೀರದಲ್ಲಿ ಧಾತುಸಾಮ್ಯ ಏರ್ಪಡುತ್ತದೋ ಅವುಗಳನ್ನು ಇಲ್ಲಿ ವಿವರಿಸುತ್ತಾರೆ.

ಅಕ್ಕಿ, ಷಷ್ಟಿಕಶಾಲಿ, ಗೋಧಿ, ಬಾರ್ಲಿ, ಹೆಸರು, ಹಾಲು, ಮಜ್ಜಿಗೆ, ಬೆಣ್ಣೆ, ತುಪ್ಪ, ಪಡುವಲ, ಹೀರೆ, ಇತ್ಯಾದಿ ಲಘುವಾದ ತರಕಾರಿಗಳು, ಸಿಹಿಹಾಲೆ (ಜೀವಂತೀ), ಹೊನಗೊನ್ನೆ (ಮತ್ಸ್ಯಾಕ್ಷೀ), ಕೊಮ್ಮೆ (ಪುನರ್ನವಾ), ಚಕ್ಕೋತ (ವಾಸ್ತೂಕ) ಇತ್ಯಾದಿ ಪಂಚಶಾಕಗಳು, ದಾಳಿಂಬೆ, ದ್ರಾಕ್ಷಿ, ನೆಲ್ಲಿಕಾಯಿ, ಜೇನುತುಪ್ಪ, ಸೈಂಧವ ಲವಣ, ಗಂಗೋದಕ ಇತ್ಯಾದಿಗಳನ್ನು ಹೇಳಿರುತ್ತಾರೆ.

ನಿಷಿದ್ಧ ಭೋಜನ

ಎಂತಹ ಪದಾರ್ಥಗಳನ್ನು ಬಳಸಿದಾಗ ಆರೋಗ್ಯ ಕೆಡುತ್ತದೆ ಎನ್ನುವಾಗ ಮಲಿನವಾಗಿರುವ, ಇತರ ಪದಾರ್ಥಗಳು ಸೇರಿ ಕೆಟ್ಟಿರುವ, ಪುನಃ ಕುದಿಸಿರುವ, ಅತಿಯಾಗಿ ತರಕಾರಿ-ಸೊಪ್ಪುಗಳಿಂದ, (ಅತಿಪ್ರಮಾಣದಲ್ಲಿ) ಕಿರುಧಾನ್ಯಗಳಿಂದ ಕೂಡಿರುವ, ಅತಿ ಉಪ್ಪಾಗಿರುವ ಪದಾರ್ಥಗಳು, ಒಣಗಿದ, ಬಾಡಿದ ತರಕಾರಿಗಳು, ಕೃಶಪ್ರಾಣಿಗಳ ಮತ್ತು ಶುಷ್ಕಮಾಂಸ ವರ್ಜ್ಯ. ಅಂತೆಯೇ ಹಾಲು ಒಡೆಸಿ ಮಾಡಿದ ಪದಾರ್ಥಗಳು, ಮೊಸರು, ಉದ್ದು, ಅವರೆ, ಮೊಳಕೆಕಾಳುಗಳು ಇವುಗಳ ನಿತ್ಯೋಪಯೋಗ ಕೂಡದು.

ಹೀಗೆ ಪದಾರ್ಥಗಳನ್ನು ಅವುಗಳ ಗುಣ-ಕರ್ಮವನ್ನರಿತು ಸಕಾಲಿಕವಾಗಿ, ಸೂಕ್ತವಾಗಿ ಬಳಸಿಕೊಂಡಾಗ ಅದರ ಪೂರ್ಣಲಾಭ ದೊರೆಯುತ್ತದೆ.

ವಿರುದ್ಧಾಹಾರ

ಭೌತಿಕವಾಗಿ                                 (ಚ. ಸೂ 26/95)

ದೇಶವಿರುದ್ಧ, ಕಾಲವಿರುದ್ಧ, ಅಗ್ನಿವಿರುದ್ಧ, ಮಾತ್ರಾವಿರುದ್ಧ, ಸಾತ್ಮ್ಯವಿರುದ್ಧ, ಸಂಸ್ಕಾರವಿರುದ್ಧ, ವೀರ್ಯವಿರುದ್ಧ, ಕೋಷ್ಠವಿರುದ್ಧ, ಅವಸ್ಥಾವಿರುದ್ಧ, ಕ್ರಮವಿರುದ್ಧ, ಸಂಯೋಗವಿರುದ್ಧ …………   ಇತ್ಯಾದಿ 18 ರೀತಿಯ ವಿರುದ್ಧ ಆಹಾರಗಳನ್ನು ಚರಕಾಚಾರ್ಯರು ತಮ್ಮ ಗ್ರಂಥದಲ್ಲಿ ವಿವರಿಸಿರುತ್ತಾರೆ. ಇಂದು ಟಿ.ವಿ ಇತ್ಯಾದಿ ಮಾಧ್ಯಮಗಳಲ್ಲಿ ನಾವು ಗಮನಿಸುವಂತೆ ಈ ಯಾವುದೇ ಮಾಹಿತಿ, ನೋಟ ಇಲ್ಲದೇ ಕೇವಲ ಬಾಯಿರುಚಿಯನ್ನೇ ಆಧಾರವಾಗಿಟ್ಟುಕೊಂಡು ವಿವರಿಸುವ ಆಹಾರಗಳ ಸಂಯೋಗ (combination) ಹೇಗೆಲ್ಲ ವಿರುದ್ಧವಾಗಿ ಪರಿಣಮಿಸಬಹುದು, ಅವುಗಳ ಪರಿಣಾಮವೇನು ಎಂಬುದರ ಕುರಿತು ಆಯುರ್ವೇದ ಸಾವಿರಾರು ವರ್ಷಗಳ ಹಿಂದೆಯೇ ಅತ್ಯಂತ ಆಳವಾದ, ಸವಿವರವಾದ ನೋಟ ನೀಡುತ್ತದೆ.

(ವಿರುದ್ಧಾಹಾರಗಳ ಕುರಿತಾದ ಮಾಹಿತಿ ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ)

ಅಂತೆಯೇ ಧರ್ಮಶಾಸ್ತ್ರ ವಿವರಿಸುವಂತೆ ದ್ರವ್ಯದುಷ್ಟ, ಭಾವದುಷ್ಟ, ಸಂಸ್ಕಾರದುಷ್ಟ, ದೃಷ್ಟಿದುಷ್ಟ, ಕಾಲದುಷ್ಟ, ಸ್ಪರ್ಶದುಷ್ಟ, ದೇಶದುಷ್ಟ, ವರ್ಣದುಷ್ಟ, ಭಾವದುಷ್ಟ ……. ಇತ್ಯಾದಿ ಅನೇಕ ವಿವರಣೆಗಳನ್ನೂ ನೋಡುತ್ತೇವೆ.

  1. ನಿದ್ರಾ

ಶರೀರದ, ಮನಸ್ಸಿನ ಆಯಾಸವನ್ನೆಲ್ಲ ಕಳೆಯಬಲ್ಲ ನಿದ್ರೆಯನ್ನು ಯಾರು, ಯಾವಾಗ, ಹೇಗೆ, ಎಷ್ಟು ಪ್ರಮಾಣದಲ್ಲಿ ಮಾಡಬೇಕು ಎಂಬ ಅನೇಕಾನೇಕ ಸೂಕ್ಷ್ಮ ವಿಷಯಗಳನ್ನು ಆಯುರ್ವೇದ ನೀಡುತ್ತದೆ. ರಾತ್ರಿನಿದ್ರೆ ಅವಶ್ಯವಾಗಿ ಮಾಡಬೇಕು. ಹಗಲುನಿದ್ರೆ ಸರ್ವಥಾ ನಿಷಿದ್ಧ. ಸಾಮಾನ್ಯವಾಗಿ ಒಬ್ಬನಿಗೆ 6-8 ಗಂಟೆಗಳ ಕಾಲ ನಿದ್ರೆ ಸಾಕಾಗುತ್ತದೆ ಇತ್ಯಾದಿ. ಈ ನಿಯಮಗಳಿಗೆ ತಕ್ಕಂತೆ ಸೂಕ್ತವಾಗಿ ನಿದ್ರೆ ಮಾಡಿದಾಗ ರಜಸ್ಸು, ತಮಸ್ಸೆಲ್ಲವೂ ಕಳೆದು ಮನಸ್ಸು ಸತ್ವಪ್ರಧಾನವಾಗುತ್ತದೆ.

  1. ಮೈಥುನ

ಸ್ವಲ್ಪ ಮಡಿವಂತಿಕೆಯಿಂದ ನೋಡುವ ಈ ವಿಚಾರವಾಗಿ ಆಯುರ್ವೇದ ತ್ರಯೋಪಸ್ತಂಭ ಎಂಬ ಶೀರ್ಷಿಕೆಯಲ್ಲಿ ಹೆಚ್ಚಿನ ಮಹತ್ವವನ್ನು ಕೊಟ್ಟು ವಿವರಿಸುತ್ತದೆ. ಈ ವಿಷಯದಲ್ಲಿ ಯಾರು, ಯಾವ ವಯಸ್ಸಿನಲ್ಲಿ, ಯಾರೊಡನೆ, ಹೇಗೆ, ಎಷ್ಟು ಪ್ರಮಾಣದಲ್ಲಿ ತೊಡಗಬೇಕು ? ಅದರ ಗುಣ-ದೋಷಗಳೇನು ? ಎಂಬ ಬಗ್ಗೆ ಆಳವಾದ ನೋಟ ನೀಡಲಾಗಿದೆ. ಪ್ರತಿಯೊಂದು ಜೀವಿಯ ಗೃಹಸ್ಥಾಶ್ರಮದ ಅವಿಭಾಜ್ಯ ಅಂಗವಾಗಿರುವ ಈ ವಿಷಯವನ್ನು ಶಾಸ್ತ್ರೀಯವಾಗಿ ಅಳವಡಿಸಿಕೊಂಡಾಗ ಭೌತಿಕವಾಗಿ ತ್ರಿದೋಷಗಳಲ್ಲಿ ಸಮಸ್ಥಿತಿಯೂ, ಮನಸ್ಸಿನ ನೇರದಲ್ಲಿ ಕಾಮ-ಕ್ರೋಧ ಮುಂತಾದ ವಿಷಯಗಳೂ (ತನ್ಮೂಲಕ ರಜಸ್ಸು – ತಮಸ್ಸುಗಳು) ಸಮಸ್ಥಿತಿಗೆ ಬರುವುದನ್ನೂ ಗಮನಿಸುತ್ತೇವೆ.

ಎಂತಹ ಸುಂದರವಾದ ಜೋಡಣೆ !!! ಜೀವನವಿಧಾನ !!!

ಇವುಗಳಲ್ಲದೇ ಸದ್ವ್ರತಗಳನ್ನು ಕುರಿತು ವಿವರಿಸುತ್ತಾರೆ :

ಸದ್ವ್ರತ

ಪ್ರಾಣಿಹಿಂಸೆ, ಕಳ್ಳತನ (ಸ್ತೇಯ), ಗುರುಪತ್ನಿಯೇ ಮೊದಲಾದವರ ಜೊತೆ ನಿಷಿದ್ಧಕಾಮ (ಅನ್ಯಥಾಕಾಮ) ಎಂಬ ಮೂರು ಶಾರೀರಿಕ ಪಾಪಕರ್ಮಗಳು ; ಇತರರ ನಡುವೆ ಪರಸ್ಪರ ದ್ವೇಷವನ್ನು ತಂದಿಡುವ ಮಾತುಗಳು (ಪೈಶುನ್ಯ), ಪರರ ಮನಸ್ಸನ್ನು ನೋಯಿಸುವ ಬಿರುನುಡಿಗಳು (ಪರುಷ), ಸುಳ್ಳುಮಾತು (ಅನೃತ), ಅಸಂಬದ್ಧವಾದ ಮಾತು (ಆಲಾಪ) ಎಂಬ ನಾಲ್ಕು ಮಾತಿನರೂಪವಾದ ಪಾಪಕರ್ಮಗಳು ; ಇತರ ಜೀವಿಗಳು ಸಾಯಲೆಂದು ಅಪೇಕ್ಷಿಸುವುದು (ವ್ಯಾಪಾದ), ಪರರ ಗುಣ-ಐಶ್ವರ್ಯಗಳಿಗೆ ಅಸೂಯೆಪಡುವುದು (ಅಭಿದ್ಯಾ), ನಾಸ್ತಿಕತೆ, ನೋಡಿದ ಎಲ್ಲ ವಸ್ತು – ವಿಷಯಗಳಲ್ಲಿ ಋಣಾತ್ಮಕವಾದ ಚಿಂತನೆ (Negative attitude, ದೃಗ್ವಿಪರ್ಯಯ) ಈ ರೀತಿ ಮೂರು ಮಾನಸಿಕ ಪಾಪಕರ್ಮಗಳು ಇವುಗಳನ್ನು ತ್ಯಜಿಸಬೇಕು.

ಅವಶ್ಯಕತೆಯಿರುವವರಿಗೆ ಸೂಕ್ತವಾದ ದಾನಮಾಡುವುದು, ಎಲ್ಲರಿಗೂ ಉಪಕಾರಿಯಾಗಿರುವುದು ; ಗೋ, ವಿಪ್ರ ಮುಂತಾದ ಪೂಜನೀಯವಾದವುಗಳನ್ನು ಗೌರವಿಸುವುದು ; ಸಂಪತ್ತು ಬಂದಾಗ ಹಿಗ್ಗದೇ, ವಿಪತ್ತು ಬಂದಾಗ ಕುಗ್ಗದೇ ಸಮಸ್ಥಿತಿಯಲ್ಲಿರುವುದು

ಸಂದರ್ಭೋಚಿತವಾಗಿ ಮಾತನಾಡುವುದು ; ಇಂದ್ರಿಯಗಳನ್ನು ಅತಿಯಾಗಿ ಲಾಲಿಸುವುದಾಗಲೀ, ದಂಡಿಸುವುದಾಗಲೀ ಮಾಡದಿರುವುದು ; ಸಕಲ ಆಚಾರಗಳನ್ನು ಅತಿಯಾಗಿಯೂ ಅಲ್ಲದೇ, ಅತಿಕಡಿಮೆಯೂ ಅಲ್ಲದೇ ಮಧ್ಯಮ ಪ್ರಮಾಣದಲ್ಲಿ ಅನುಸರಿಸುವುದು ; ಸದಾಚಾರಿಗಳ ನಡವಳಿಗೆಗಳನ್ನು ಸದಾ ಅನುಸರಿಸುವುದು ;

ಸಕಲಪ್ರಾಣಿಗಳಲ್ಲೂ ದಯೆ (ಆರ್ದ್ರಸಂತಾನತಾ) ; ತ್ಯಾಗ (ಯಾವ ರೀತಿಯ ವಿಷಯಸುಖಗಳಿಗೂ ಅಂಟಿಕೊಳ್ಳದಿರುವುದು) ; ಕಾಯಾ – ವಾಚಾ – ಮನಸಾ ಇಂದ್ರಿಯನಿಗ್ರಹ ಮಾಡುವುದು ; ಪರರ ಲಾಭವನ್ನೇ ತನ್ನ ಲಾಭವೆಂದು ಭಾವಿಸುವುದು (ಸ್ವಾರ್ಥಬುದ್ಧಿಯನ್ನು ಬಿಡುವುದು)        ಇವುಗಳನ್ನು ಸದ್ವ್ರತ ಎಂದು ಕರೆದು ಇವುಗಳ ಅವಶ್ಯವಾಗಿ ಪಾಲಿಸಬೇಕು ಎಂದಿದ್ದಾರೆ.

ಮುಂದಿನ ಪ್ರಶ್ನೆ – ಇವೆಲ್ಲ ಏಕೆ ?

ಯೋಗವು ತನ್ನ ಎಂಟು ಅಂಗಗಳಲ್ಲಿ ಪ್ರತಿಪಾದಿಸುವ ಜೀವಾತ್ಮ – ಪರಮಾತ್ಮರ ಸಂಯೋಗ ಅಥವಾ ಭಗವತ್ಪ್ರಾಪ್ತಿ, ಅಥವಾ ಮೋಕ್ಷವೇ ಸಿದ್ಧಿಸಲ್ಪಡಬೇಕಾದ್ದು. ಇದೇ ಎಲ್ಲ ಭಾರತೀಯ ಶಾಸ್ತ್ರಗಳೂ ಪ್ರತಿಪಾದಿಸಿರುವುದು, ಪ್ರಸ್ತುತ ನಾವು ಮರೆತಿರುವುದು.

ಇದಕ್ಕಾಗಿ ಭೌತಿಕ ಸ್ತರದಲ್ಲಿ ತ್ರಿದೋಷಗಳ ಸಾಮ್ಯತೆ, ದೈವಿಕ ಸ್ತರದಲ್ಲಿ ತ್ರಿಗುಣಗಳ ಸಾಮ್ಯತೆ– ತನ್ಮೂಲಕ ಮನೋನಿಗ್ರಹ, ಮುಂದೆ ಹೊರಮುಖವಾಗಿ ಹರಿಯುವ ಮನಸ್ಸನ್ನು ಒಳಗೆ ಹರಿಸಿ ಅಧ್ಯಾತ್ಮ ಸಾಧನೆಯ ಮುಖಾಂತರ ತ್ರಿಗುಣಾತೀತನಾದ ಭಗವತ್ಪ್ರಾಪ್ತಿ ಇದೇ ಜೀವನದ ಗುರಿ ಎಂದು ಎಲ್ಲ ಭಾರತೀಯ ಶಾಸ್ತ್ರಗಳೂ ಒಕ್ಕೊರಲಿನಿಂದ ಸಾರುತ್ತಿವೆ. ಶ್ರೀರಂಗ ಮಹಾಗುರುಗಳು ವಿವರಿಸುತ್ತಿದ್ದಂತೆ “ ಬೀಜ – ವೃಕ್ಷ ನ್ಯಾಯ “ ಎಂದರೆ ಹೇಗೆ ಬೀಜದಿಂದ ತನ್ನ ಯಾತ್ರೆಯನ್ನು ಪ್ರಾರಂಭಿಸಿದ ವೃಕ್ಷವೊಂದು ಕೊನೆಯಲ್ಲಿ ಬೀಜದಲ್ಲೇ ನಿಲ್ಲುತ್ತದೋ ಹಾಗೆ ಪರಮಾತ್ಮನಿಂದ ಪ್ರಾರಂಭವಾದ ಈ ಜೀವಾತ್ಮನ ಯಾತ್ರೆ ಅಲ್ಲೇ ನೆಲೆನಿಲ್ಲಬೇಕು. ಅದೇ ಪೂರ್ಣಜೀವನ ಎನಿಸಿಕೊಳ್ಳುತ್ತದೆ. ಅಂತಹ ಲಾಭಕ್ಕಾಗಿ ಅವಶ್ಯ ಬೇಕಾಗಿರುವ ಮಾನಸಿಕ ಸ್ವಾಸ್ಥ್ಯ. ಇದಕ್ಕಾಗಿ ಜ್ಞಾನಿಗಳಾಗಿದ್ದ ಆಯುರ್ವೇದ ಆಚಾರ್ಯರು ನೀಡಿರುವ ದಿನಚರ್ಯಾ ವಿಧಿಯನ್ನು ಪ್ರತಿಯೊಬ್ಬರೂ ಅವಶ್ಯವಾಗಿ, ಸೂಕ್ತವಾಗಿ ಅನುಸರಿಸೋಣ, ಅವುಗಳ ಪೂರ್ಣಲಾಭವನ್ನು ಹೊಂದೋಣ.

|| ಶ್ರೀಸದ್ಗುರು ಚರಣಾರವಿಂದಾರ್ಪಣಮಸ್ತು ||